
ಉದಯವಾಹಿನಿ ದೇವದುರ್ಗ: ಗ್ರಾಮೀಣ ಭಾಗದ ಮಕ್ಕಳ ಲಾಲನೆ ಪಾಲನೆಯ ಜೊತೆಗೆ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ,ಮಕ್ಕಳು ಹಾಗೂ ಗರ್ಭಿಣಿ, ತಾಯಂದಿರಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ ಸೇರಿ ವಿವಿಧ ರೋಗಗಳು ಬಾರದಂತೆ ತಡೆಯುವಲ್ಲಿ ಯಶ್ವಸ್ವಿಯಾಗಿದ್ದಾರೆ. ಪೌಷ್ಟಿಕ ಆಹಾರಧಾನ್ಯ ಸಮರ್ಪಕವಾಗಿ ವಿತರಣೆ ಮಾಡುತ್ತಿದ್ದಾರೆ ಎಂದು ಹಿರೇಬೂದೂರು ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಗಿ ಹೇಳಿದರು.ತಾಲೂಕಿನ ಗಬ್ಬೂರು ಹೋಬಳಿಯ ಹದ್ದಿನಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಾಣಗೊಂಡ ಅಂಗನವಾಡಿ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆಯ ಯಶಸ್ವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರವು ಪ್ರಮುಖವಾಗಿದೆ, ಇನ್ನೂ ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ಗರ್ಭಿಣಿ ಹಾಗೂ ತಾಯಂದಿರ ಕಷ್ಟ ಸುಖ ಕೇಳುವುದರ ಜೊತೆಗೆ ಅವರಿಗೆ ಆಹಾರದೊಂದಿಗೆ ಆತ್ಮವಿಶ್ವಾಸ ತುಂಬವಂಥ ಕೆಲಸ ಕಾರ್ಯಕರ್ತೆಯರು ಮಾಡುತ್ತಿದ್ದಾರೆ. ಸರ್ಕಾರ ಇವರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಅಂಗನವಾಡಿ ಕೇಂದ್ರಗಳ ಬಲವರ್ಧನೆಗಾಗಿ ಪ್ರಮುಖ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಭೂಧಾನಿ, ನಿವೃತ್ತ ಉಪನ್ಯಾಸಕ ಎಂ.ಶೇಖರಪ್ಪಗೌಡ, ಗ್ರಾಪಂ ಸದಸ್ಯರಾದ ಬಂದಪ್ಪಗೌಡ, ಶರಣಗೌಡ, ಪಿಡಿಒ ಫಯಾಜ್ ಅಲಿ, ಕಾರ್ಯಕರ್ತೆ ಮೀರಾ ಹಾಗೂ ಗ್ರಾಮಸ್ಥರು ಇದ್ದರು.
