
ಉದಯವಾಹಿನಿ, ಶಿಡ್ಲಘಟ್ಟ: ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಸರ್ಕಾರಿಶಾಲೆಯ ಪಕ್ಕದಲ್ಲಿ ರಾಶಿ ರಾಶಿ ಕಸ ಇರುವುದು ಹೇಳತೀರವಾಗಿದೆ. ಇನ್ನು ಕಸದ ರಾಶಿ ಗಬ್ಬೆದ್ದು ನಾರುತ್ತಿದೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸಾರ್ವಜನಿಕರಿಂದ ವ್ಯಕ್ತವಾಗಿದೆ.ತಾಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬಂದಿರುವ ದೃಶ್ಯವಾಗಿದೆ. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ 3-4 ಬಾರಿ ತಾಲೂಕು ಆಡಳಿತ ವತಿಯಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕೇವಲ ಮುಖ್ಯರಸ್ತೆಗಳಲ್ಲಿ ಹೆಸರಿಗೆ ಮಾತ್ರ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾರೆ.ಶಾಲೆ, ಅಂಗನವಾಡಿ ಹಾಗೂ ಅಂಗಡಿಗಳ ಮುಂದೆ ಇರುವಂತ ಕಸವನ್ನು ಅಭಿವೃದ್ಧಿ ಅಧಿಕಾರಿಗಳು ನೋಡಿ ನೋಡದಂತೆ ಹೋಗುತ್ತಾರೆ. ಪಿಡಿಒ ಅವರು ಕಾರು ನಿಲ್ಲಿಸುವ ಮುಂಭಾಗದಲ್ಲಿ ರಾಶಿ ರಾಶಿ ಕಸ ಇದ್ದರು ನೋಡದಂತೆ ಹೋಗುತ್ತಾರೆ. ಒಂದು ಕಡೆ ಸರ್ಕಾರಿ ಅಂಗನವಾಡಿ ಶಾಲೆಯಾದರೆ ಮತ್ತೊಂದು ಕಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಓಡಾಡುತ್ತಿರುತ್ತಾರೆ. ಈ ಕಸದ ರಾಶಿಯಿಂದ ರೋಗ-ರುಜೀನಗಳು ಹೆಚ್ಚಾಗಿ ಖಾಯಿಲೆಗಳಿಗೆ ತುತ್ತಾಗುತ್ತಾರೆ ಎಂಬ ಭಯದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.
ಒಟ್ಟಾರೆಯಾಗಿ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 3-4 ಬಾರಿ ತಾಲ್ಲೂಕು ಆಡಳಿತ ಸ್ವಚ್ಛತಾ ಕಾರ್ಯಕ್ರಮ ನಡೆಸಿದರೂ ಸ್ವಚ್ಛತೆಯಂತೂ ಆಗಿಲ್ಲ. ಇನ್ನು ಸ್ವಚ್ಛತಾ ಕಾರ್ಯಕ್ರಮ ನೆಪ ಮಾತ್ರಕ್ಕೆ ಹಮ್ಮಿಕೊಳ್ಳುತ್ತಾರೆ ಎಂಬುದು ಜನರ ಅಭಿಪ್ರಾಯವಾಗಿದೆ. ಇನ್ನಾದರೂ ಅಭಿವೃದ್ಧಿ ಅಧಿಕಾರಿಗಳು ಸ್ವಚ್ಛತೆ ಮಾಡುತ್ತಾರೋ ಇಲ್ಲವೋ ಕಾದು ನೋಡೋಣ
ಶಾಲೆಗೆ ಸುಸರ್ಜಿತ ಕಾಂಪೌಂಡ್ ಇಲ್ಲ, ಹಾಗೇ ರಾತ್ರಿ ಸಮಯದಲ್ಲಿ ಪುಂಡು ಪೋಕರಿಗಳು ಶಾಲೆಯ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಸಿ, ತುಂಬಾ ಗಲೀಜು ಮಾಡಿರುತ್ತಾರೆ. ಅದನ್ನು ಮಕ್ಕಳ ಕೈಯಿಂದಲೇ ಸ್ವಚ್ಛತೆ ಮಾಡಿಸುತ್ತೇವೆ. ಅದೇ ರೀತಿ ಶಾಲೆಯ ಮುಂಭಾಗ ರಾಶಿ ರಾಶಿ ಕಸ ಹಾಕುತ್ತಾರೆ ಅದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋಜನವಾಗಿಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀಳುತ್ತದೆ. ರೋಗ-ರುಜೀನಗಳು ಹೆಚ್ಚಾಗಿ ಖಾಯಿಲೆಗೆ ತುತ್ತಾಗುವ ಭಯದಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಇದ್ದಾರೆ
– ಡಿ.ಸಿ ಉಮಾ, ಮುಖ್ಯೋಪಾದ್ಯಾಯಿನಿ.
ಇತ್ತೀಚಿಗೆ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮುಖ್ಯ ರಸ್ತೆಗಳು ಹಾಗೂ ಕೆಇಬಿ ಜಾಗದಲ್ಲಿ ಮತ್ತಿತರ ಕಡೆ ಸ್ವಚ್ಛತೆ ಮಾಡಿದ್ದೇವೆ. ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದ್ದಾರೆ. ಮುಂದಿನ ಸಭೆಯಲ್ಲಿ ದಿಬ್ಬೂರಹಳ್ಳಿ ಗ್ರಾಮ ಸಂಪೂರ್ಣ ಸ್ವಚ್ಛತೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಶಾಲೆಯ ಮುಂಭಾಗ ನಾನು ಸ್ವಚ್ಛತೆ ಮಾಡಿಸಿದೆ ನಂತರ ಅಲ್ಲಿ ಕಸ ಹಾಕುತ್ತಾರೆ, ಇತ್ತೀಚಿಗೆ ಶಾಸಕರು ಬಂದಾಗ ಸ್ವಚ್ಛತೆ ಮಾಡಲಾಗಿತ್ತು.
-ಶ್ರೀನಿವಾಸ ದಿಬ್ಬೂರಹಳ್ಳಿ ಗ್ರಾಪಂ ಅಭಿವೃದ್ದಿ ಅಧಿಕಾರಿ.

