ಉದಯವಾಹಿನಿ, ವಿಜಯವಾಡ : ನಗರದ ಟಿವಿಎಸ್ ಬೈಕ್ ಶೋ ರೂಂನಲ್ಲಿ ಇಂದು ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿ ೩೦೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿ ೧೫ ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಬೆಂಕಿ ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ.ಆದರೆ ಸುಮಾರು ೧೫ ಕೋಟಿಗೂ ಹೆಚ್ಚು ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ. ಚೆನ್ನೈ, ಕೋಲ್ಕತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಶೋ ರೂಂ ಇತ್ತು. ಅವಘಡಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಶೋ ರೂಂನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಗೋದಾಮಿಗೂ ವ್ಯಾಪಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.ಶೋ ರೂಂ, ಗೋದಾಮು ಮತ್ತು ಸೇವಾ ಕೇಂದ್ರ (ಸರ್ವಿಸ್ ಸೆಂಟರ್) ಒಂದೇ ಕಡೆ ಇದ್ದದ್ದರಿಂದ ವಿಜಯವಾಡ ಮತ್ತು ಕೃಷ್ಣಾ ಜಿಲ್ಲೆಯಲ್ಲಿ ಇದು ಟಿವಿಎಸ್ ವಾಹನಗಳ ಪ್ರಮುಖ ಕೇಂದ್ರವಾಗಿತ್ತು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
