ಉದಯವಾಹಿನಿ,ಕೀವ್ (ಉಕ್ರೇನ್): ಈಶಾನ್ಯ ಉಕ್ರೇನ್‌ನ ಶಾಲೆಯೊಂದರ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ಸುಮಿ ಪ್ರಾಂತ್ಯದ ರೊಮ್ನಿಯಲ್ಲಿ ನಡೆದಿದೆ. ಅಲ್ಲದೆ ಅತ್ತ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ.
ಕೈವ್‌ನ ಪೂರ್ವಕ್ಕೆ ೨೩೦ ಕಿಲೋಮೀಟರ್‌ಗಳ ದೂರದಲ್ಲಿರುವ ಉಕ್ರೇನ್‌ನ ರೊಮ್ನಿ ಗ್ರಾಮದಲ್ಲಿ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಶಾಲಾ ನಿರ್ದೇಶಕ, ಉಪ ನಿರ್ದೇಶಕ, ಕಾರ್ಯದರ್ಶಿ ಮತ್ತು ಗ್ರಂಥಪಾಲಕ ಮೃತಪಟ್ಟಿದ್ದಾರೆ. ರೋಮ್ನಿ ಶಾಲೆಯ ಮೇಲೆ ರಷ್ಯಾದ ದಾಳಿಯಲ್ಲಿ ಮೃತರ ಸಂಖ್ಯೆ ನಾಲ್ಕಕ್ಕೇರಿದೆ. ಘಟನೆಯ ವೇಳೆ ಶಾಲೆಯ ಬಳಿ ಹೋಗುತ್ತಿದ್ದ ನಾಲ್ವರು ಕೂಡ ಗಾಯಗೊಂಡಿದ್ದಾರೆ. ಶಾಲೆಯಲ್ಲಿ ಸುರಕ್ಷಿತ ಪ್ರದೇಶಕ್ಕೆ ತೆರಳುವ ಜಾಗವಿದೆ. ಆದರೆ ದುರದೃಷ್ಟವಶಾತ್ ಅಲಾರ್ಮ್ ವೇಳೆ ಜನರು ಅಲ್ಲಿಗೆ ತೆರಳಲಿಲ್ಲ. ಸದ್ಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಅಂತ್ಯಗೊಂಡಿದೆ ಎಂದು ಉಕ್ರೇನ್ ಆಂತರಿಕ ಸಚಿವ ಇಗೊರ್ ಕ್ಲೈಮೆಂಕೊ ಟೆಲಿಗ್ರಾಮ್‌ನಲ್ಲಿ ಹೇಳಿದ್ದಾರೆ. ದಾಳಿಗೆ ಸಂಬಂಧಿಸಿದಂತೆ ಸಚಿವ ಇಗೊರ್ ಅವರು ಚಿತ್ರವನ್ನು ಕೂಡ ಪೋಸ್ಟ್ ಮಾಡಿದ್ದು, ಇದರಲ್ಲಿ ಶಾಲಾ ಅವಶೇಷ ಕಂಡುಬಂದಿದ್ದು, ೧೨ಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ದೃಶ್ಯ ಕಂಡುಬಂದಿದೆ.
