ಉದಯವಾಹಿನಿ, ಬೀದರ್: ಭಾಲ್ಕಿಯ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ. ಬಸವಲಿಂಗಪಟ್ಟ ದೇವರ ಜನ್ಮದಿನಕ್ಕೊಂದು ವಿಶೇಷವಿದೆ. ಅನಾಥ ಮಕ್ಕಳನ್ನು ಅಕ್ಕರೆಯಿಂದ ಪಾಲನೆ, ಪೋಷಣೆ ಮಾಡಿ ಹೊಸ ಜೀವನ ನೀಡುವ ಪೂಜ್ಯರು ತಮ್ಮ ಜನ್ಮದಿನವನ್ನು ಈ ಅನಾಥ ಮಕ್ಕಳಿಗೆ ಅರ್ಪಿಸಿದ್ದಾರೆ.
ಪೂಜ್ಯರ ದಿನವನ್ನು ಸುದೈವಿ ಮಕ್ಕಳ ಜನ್ಮದಿನವಾಗಿ ಆಚರಿಸುವ ಅದ್ಭುತ ಪರಂಪರೆ ಬಾಲ್ಕಿಯಲ್ಲಿದೆ. ಮಾತೃ ಹೃದಯಿ , ಅನಾಥ ರಕ್ಷಕ, ದಯಾ, ಕರುಣೆ, ಅನುಕಂಪ, ಸಹನೆ, ತಾಳ್ಮೆ, ಸತ್ಯನಿಷ್ಠೆ, ಪ್ರಾಮಾಣಿಕತೆಯಂತಹ ಗುಣಗಳನ್ನು ತುಂಬಿಕೊಂಡಿರುವ ಪೂಜ್ಯರು 2007 ರಲ್ಲಿ ತಮ್ಮ ಜನ್ಮದಿನವನ್ನು ಅನಾಥ ಮಕ್ಕಳಿಗೆ ಅರ್ಪಿಸಿದ್ದರು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 25ರಂದು ಸುದೈವಿ ಮಕ್ಕಳ ಜನ್ಮದಿನ ಆಚರಿಸುವ ಪರಂಪರೆ ಆರಂಭವಾಗಿದೆ. ಆಗಸ್ಟ್ 25ರಂದು ಹಿರೇಮಠದಲ್ಲಿ ಅನಾಥ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅನಾಥ ಮಕ್ಕಳಿಗೆ ಹೊಸ ಉಡುಪು ತೊಡಿಸಿ ಅವರಿಂದಲೇ ಕೇಕು ಕತ್ತರಿಸಿ ಹಂಚಿ ಹೋಳಿಗೆ ಊಟ ಮಾಡಿಸಲಾಗುತ್ತದೆ. ಜೊತೆಗೆ ಜ್ಯೋತಿ ಬೆಳಗಿ ನಿಮ್ಮ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ ಎಂದು ಹರಸಲಾಗುತ್ತದೆ. ಯಾರಿಗೆ ಯಾರು ಇಲ್ಲವೋ ಅಂತವರಿಗೆ ದೇವರಿದ್ದಾನೆ. ಅಶಕ್ತರ ಅನಾಥರ ದೀನ ದಲಿತರ ಸೇವೆಯು ದೇವರ ಪೂಜೆಗೆ ಸಮಾನವಾಗಿದೆ. ಯಾರೊಬ್ಬರೂ ಅನಾಥರಲ್ಲ. ಮಾನವೀಯ ದೃಷ್ಟಿಯಿಂದ ನೋಡಿದಾಗ ಎಲ್ಲರೂ ನಮಗೆ ಬಂಧುಗಳಾಗಿ ಕಾಣಿಸುತ್ತಾರೆ ತಮಗೆ ಮಗು ಬೇಡವಾಗಿ ಇದ್ದರೆ ದಯವಿಟ್ಟು ಅದನ್ನು ರಸ್ತೆಯ ಮೇಲು ಚರಂಡಿಯ ಸಮೀಪ ಇಲ್ಲದೆ ನಿರ್ಜನ ಪ್ರದೇಶಗಳಲ್ಲಿ ಬಿಸಾಡಬೇಡಿ. ಅವು ಪ್ರಾಣಿಗಳಿಗೆ ಆಹಾರವಾಗಿ ಬಿಡುತ್ತವೆ. ಹಾಗೆ ಮಾಡುವುದು ಪಾಪದ ಕೆಲಸ ಬೇಕಾದರೆ ಆ ಮಗುವನ್ನು ನಮಗೆ ಕೊಡಿ ಎಂದು ಡಾ. ಬಸವಲಿಂಗ ಪಟ್ಟ ದೇವರ ನುಡಿಗಳಲ್ಲಿ ಮಾತೃ ಪ್ರೇಮ ತುಂಬಿಕೊಂಡಿದೆ.
ತಂದೆಯಾಗಿ ಪಾಲನೆ ಪೋಷಣೆ, ತಾಯಿಯಾಗಿ ಮಮತೆ ವಾಸಲ್ಯ, ಗೆಳೆಯನಾಗಿ ಸ್ನೇಹ , ಶಿಕ್ಷಕನಾಗಿ ಅಕ್ಷರ ಅಭ್ಯಾಸ , ಗುರುವಾಗಿ ಬಸವಾಧೀಶ ಶರಣರ ಆದರ್ಶ ತತ್ವ, ನೈತಿಕ ವಿಚಾರಗಳನ್ನು ಮಕ್ಕಳಲ್ಲಿ ತುಂಬುವ ಮಹತ್ಕಾರ್ಯವನ್ನು ಪೂಜ್ಯರು ಮಾಡುತ್ತಿದ್ದಾರೆ . ಡಾ. ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ,ಜವರಲಾಲ್ ನೆಹರು ತಮ್ಮ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುವಂತೆ ಹೇಳಿದ್ದರು ಡಾ. ಬಸವಲಿಂಗಪಟ್ಟ ದೇವರು ತಮ್ಮ ಜನ್ಮದಿನವನ್ನು ಸುದೈವಿ ಮಕ್ಕಳ (ಅನಾಥ ಮಕ್ಕಳ) ದಿನಾಚರಣೆಯಾಗಿ ಪರಿವರ್ತಿಸಿದ್ದಾರೆ. ಇಂತಹ ಅಪರೂಪದ ಸನ್ಯಾಸಿ ಸಿಗುವುದು ದುರ್ಲಭ. ಪೂಜ್ಯಶ್ರೀಗಳು ಮಾಡುವ ಕಾರ್ಯ ಎಲ್ಲರಿಗೂ ಮಾದರಿ ಹಾಗೂ ಅನುಕರಣೆಯವಾಗಿದೆ.

ಅನಾಥ ಮಕ್ಕಳ ಸೇವೆ ಸಾಕ್ಷಾತ್ ದೇವರ ಸೇವೆ. ಪೂಜ್ಯರು ಮಾಡುತ್ತಿರುವುದು ವರ್ಣನಾತೀತ ಕೆಲಸ. ಪೂಜ್ಯರು ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದದ್ದು.
– ಶಶಿಧರ ಕೋಸಂಬೆ.  ನಿರ್ದೇಶಕರು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಭಾಲ್ಕಿ

Leave a Reply

Your email address will not be published. Required fields are marked *

error: Content is protected !!