ಉದಯವಾಹಿನಿ, ಮುದ್ದೇಬಿಹಾಳ : ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಇದೇ ಅಗಸ್ಟ್ ೩೦ರಂದು ಮೈಸೂರಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ನೇರ ಪ್ರಸಾರ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕು ಪಂಚಾಯತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಯುವರಾಜ ಹನಗಂಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬುಧವಾರ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮೀ ಯೋಜನೆಗೆ ಸರ್ಕಾರ ಸಕಲ ಸಿದ್ಧತೆ ಕೈಗೊಂಡಿದೆ. ಮೈಸೂರಿನಲ್ಲಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಗ್ರಾಮೀಣ ಪ್ರದೇಶದ ಫಲಾನುಭವಿಗಳು ಈ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದ್ದು, ಅದರಂತೆ ಪ್ರತಿ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಳದಲ್ಲಿ ನೇರ ಪ್ರಸಾರವನ್ನು ವೀಕ್ಷಿಸಲು ಸೂಕ್ತ ಸ್ಥಳ ಗುರುತಿಸಿ ಪ್ರಾಜೆಕ್ಟರ್ ಗಳನ್ನು ಆಳವಡಿಸುವಂತೆ ತಿಳಿಸಿದರು.
ಮುಖ್ಯಮಂತ್ರಿಗಳೊಂದಿಗೆ ಸಂವಾದಿಸಲು ತಾಲೂಕಿನ ೫ ಗ್ರಾಮ ಪಂಚಾಯತಿಗಳ ಫಲಾನುಭವಿಗಳನ್ನು ಗುರುತಿಸಲು ಸೂಚಿಸಲಾಗಿದೆ. ಈ ಫಲಾನುಭವಿಗಳು ನೇರ ಪ್ರಸಾರ ಕಾರ್ಯಕ್ರಮದಲ್ಲಿ ದೂರವಾಣಿ ಮುಖಾಂತರ ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ನೇರ ಪ್ರಸಾರ ಕಾರ್ಯಕ್ರಮಕ್ಕೆ ಬೇಕಾದ ಸಂವಹನ ವ್ಯವಸ್ಥೆ, ನರೇಗಾ ಯೋಜನೆಯ ಪ್ರಗತಿ ಬಗ್ಗೆ ಚರ್ಚಿಸಿದ ಇಒ ಅವರು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ೨೦೦ ಜನ ಕೂಲಿಕಾರರ ಎಂಗೇಜ್ ಮಾಡುವುದು, ಬೇಡಿಕೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ನಿರ್ದಿಷ್ಟ ಅವಧಿಯಲ್ಲಿ ಕೆಲಸ ನೀಡುವುದು, ಅವಧಿ ಮುಗಿದ ಓಒಖ ಗಳನ್ನು ಜೀರೋ ಮಾಡದೆ ಸಕಾಲದಲ್ಲಿ ಎಂಐಎಸ್ ಮಾಡಿ ಕೂಲಿ ಪಾವತಿ ಮಾಡುವುದು, ಮಹಿಳೆಯರ, ವಿಕಲಚೇತರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ನರೇಗಾ ಯೋಜನೆ ಪ್ರಭಾರ ಸಹಾಯಕ ನಿರ್ದೇಶಕರಾದ ಖುಬಾಸಿಂಗ್ ಜಾಧವ್,ಪಂಚಾಯತ್ ರಾಜ್ ಪ್ರಭಾರ ಸಹಾಯಕ ನಿರ್ದೇಶಕ ಪಿ.ಎಸ್.ಕಸನಕ್ಕಿ, ತಾಲೂಕು ಪಂಚಾಯತಿ ವ್ಯವಸ್ಥಾಪಕರಾದ ನಿರ್ಮಲಾ ತೋಟದ, ಸಹಾಯಕ ಲೆಕ್ಕಧಿಕಾರಿ ವೀರೇಶ ಹೂಗಾರ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರವಸೂಲಿಕಾರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!