ಉದಯವಾಹಿನಿ, ಔರಾದ್ : ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರು ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಅಧ್ಯಾತ್ಮಿಕ ಇತ್ಯಾದಿ ರಂಗಗಳಲ್ಲಿ ಸಾಧನೆಗೈದು ಸಮಾಜಮುಖಿ ಕಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂದು ಸಂತಪೂರ ಪಿಎಸ್ಐ ಮಹೆಬೂಬ್ ಅಲಿ ಹೇಳಿದರು.
ತಾಲ್ಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರ 73ನೇ ಜನ್ಮದಿನಾಚರಣೆ (ಸುದೈವಿ ಮಕ್ಕಳ ದಿನಾಚರಣೆ) ಕಾರ್ಯಕ್ರಮದಲ್ಲಿ ಸುದೈವಿ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದ ಅವರು ನಮ್ಮ ನಾಡು ಶರಣ ಸಂತರ ಬೀಡಾಗಿದ್ದು ಭಾವೈಕ್ಯತೆ ನಮ್ಮ ನಾಡಿನ ಗುಣ, ಶರಣರ ಮಾರ್ಗದಲ್ಲಿ ಜೀವನ ಸಾಗಿದರೆ ನಮ್ಮ ಬದುಕು ಹಸನಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ, ಮಾತೃ ಹೃದಯಿ ಪೂಜ್ಯಶ್ರೀ ಡಾ. ಬಸವಲಿಂಗ ಪಟ್ಟದೇವರು ಕರುಣಾಮಯಿ, ಗುಣಮಟ್ಟ ಶಿಕ್ಷಣ, ಸಮಾಜದ ಮೌಲ್ಯಗಳನ್ನು ಉಳಿಸಿ ಬೆಳೆಸುವುದರಲ್ಲಿ ಶ್ರಮಿಸುತ್ತಿದ್ದಾರೆ. ಪೂಜ್ಯರು ಸಮಾಜಕ್ಕೆ ಇನ್ನೂ ಹೆಚ್ಚಿನ ಕಾರ್ಯ ಮಾಡಲಿ ಎಂದು ಹಾರೈಸಿದರು. ಪೊಲೀಸ್ ಸಿಬ್ಬಂದಿಗಳಾದ ಸೂರ್ಯಕಾಂತ ದೇಶಮುಖ್, ಮಹೇಶ್, ಸಂಪನ್ಮೂಲ ಶಿಕ್ಷಕ ಬಸವರಾಜ್ ನೇಳಗೆ ಉಪನ್ಯಾಸಕರಾದ ಕಲ್ಲಪ್ಪ ಬುಟ್ಟೆ, ಶಿವಪುತ್ರ ಧರಣೆ, ಈರಮ್ಮ ಕಟಗಿ, ಅಂಬಿಕಾ ವಿಶ್ವಕರ್ಮ, ವೀರಾತಾಯಿ ಕಾಂಬಳೆ ಇದ್ದರು.
