
ಉದಯವಾಹಿನಿ, ಮಾಲೂರು: ವಿಕಲಚೇತನ ಮಕ್ಕಳನ್ನು ಪ್ರೀತಿ, ಮಮತೆಯಿಂದ ಪೋಷಣೆ ಮಾಡಬೇಕೆಂದು ಪೋಷಕರಿಗೆ, ಶಿಕ್ಷಕರಿಗೆ ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು. ಪಟ್ಟಣದ ಕ್ಷೇತ್ರ ಶಿಕ್ಷಣ ಇಲಾಖೆಯ ಬಳಿರುವ ವಿಕಲಚೇತನ ಶಿಕ್ಷಣ ಶಾಲೆಯ 70 ಮಕ್ಕಳಿಗೆ ಸರ್ಕಾರದ ವತಿಯಿಂದ ಬಿಡುಗಡೆಯಾದ ಸಾಧನಾ ಪರಿಕರಗಳನ್ನು ವಿತರಿಸಿ ಮಾತನಾಡಿದರು.
ವಿಶೇಷ ಚೇತನರು ಅಸಮರ್ಥರು, ಪರಾವಲಂಬಿ ಎಂಬ ಭಾವನೆ ಬದಿಗಿರಿಸಬೇಕು. ಅವರಿಗೆ ಇತರರಿಗೆ ನೀಡಿದಂತೆ ಸೂಕ್ತ ತರಬೇತಿ, ಉದ್ಯೋಗ ಅವಕಾಶ ಮತ್ತಿತರ ಸೌಲಭ್ಯ ಒದಗಿಸಬೇಕು. ವಿಕಲಚೇತನರಲ್ಲಿ ಇರುವ ವಿಶೇಷ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಬದುಕು ಹಸನಾಗಲು ಸರ್ಕಾರ, ಸಮಾಜ, ಸಂಸ್ಥೆ ಮತ್ತು ಪೋಷಕರು ಕೈಜೋಡಿಸಬೇಕು, ವಿಶೇಷ ಚೇತನರನ್ನು ಸ್ವಾವಲಂಬಿಯಾಗಿ ಪರಿವರ್ತಿಸಲು ಸಹಕಾರ ನೀಡಬೇಕು, ಅವರಿಗೆ ಶೈಕ್ಷ ಣಿಕ ಸೌಲಭ್ಯ ನೀಡಲು ವಿಳಂಬವಾಗಬಾರದು. ವಿದೇಶದಲ್ಲಿ ಅವರಿಗೆ ವಿಶೇಷ ಸೌಲಭ್ಯ ಒದಗಿಸಿದಂತೆ ಇಲ್ಲಿ ಒದಗಿಸುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ರಮೇಶ್, ಬಿಇಒ ಚಂದ್ರಕಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಮುನೇಗೌಡ, ಸಮಾನ್ವಯಾಧಿಕಾರಿ ಎಂ.ನಂಜುಂಡೇಗೌಡ, ಪುರಸಭಾ ಸದಸ್ಯ ಎನ್.ವಿ.ಮುರಳೀರ್, ಮಾಜಿ ಸದಸ್ಯ ಎ.ಹನುಮಂತರೆಡ್ಡಿ, ಮುಖಂಡ ಮಾಸ್ತಿ ಪ್ರವೀಣ್, ಶಿಕ್ಷಕ ಮೋಹನ್, ಎಂ.ನಟರಾಜ್ ಸೇರಿದಂತೆ ಹಲವಾರು ಶಿಕ್ಷಕರು ಹಾಜರಿದ್ದರು.
