ಉದಯವಾಹಿನಿ, ದೇವರಹಿಪ್ಪರಗಿ: ಮತಕ್ಷೇತ್ರದಲ್ಲಿನ ಎಲ್ಲ ಗ್ರಾಮಗಳು ಕುಡಿವ ನೀರಿನ ಬವಣೆಯಿಂದ ಮುಕ್ತವಾಗುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಂದು ಕೆರೆಗಳನ್ನು ತುಂಬಿಸಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ತಿಳಿಸಿದರು.ತಾಲೂಕಿನ ಬಮ್ಮನಜೋಗಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ರವಿವಾರದಂದು ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿ ಮಾತನಾಡಿದ ಅವರು,ಕ್ಷೇತ್ರದಲ್ಲಿ ಈಗ ಕಾಲುವೆಗಳ ಮೂಲಕ ಬಹುತೇಕ ಕೆರೆಗಳನ್ನು ತುಂಬಿಸಲಾಗಿತ್ತಿದೆ, ಕೆರೆಗಳು ತುಂಬುವುದರಿಂದ ಗ್ರಾಮಗಳಲ್ಲಿನ ಹಳ್ಳ ಕೊಳ್ಳಗಳು ತುಂಬಿ ಹರಿದು ಕೊಳಬಾವಿಗಳ ಅಂತರ್ಜಲಮಟ್ಟ ಹೆಚ್ಚಾಗುತ್ತಿದ್ದು, ಇದರಿಂದ ಜನ ಜಾನುವಾರುಗಳಿಗೆ ನೀರಿನ ತಾಪತ್ರಯ ತಪ್ಪಲಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಗಂಗಾ ಪೂಜೆಗೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಿದರು. ಕನ್ನೊಳ್ಳಿ ಶ್ರೀಗಳು ಗಂಗಾ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ವಿಠ್ಠಲ ಹೊಸಮನಿ, ರಾಜು ಕೋಣಸಿರಸಗಿ, ಸಿದ್ದನಗೌಡ ಹತ್ತಳ್ಳಿ, ಸಿದ್ದು ಇಜೇರಿ, ವೀರೇಶ ಕುದುರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಗ್ರಾಪಂ ಸದಸ್ಯರು, ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
