ಉದಯವಾಹಿನಿ, ಇಸ್ಲಾಮಾಬಾದ್ : ತೋಷಾಖಾನ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಪುನರಾರಂಭಿಸಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳಲಿದೆ.
ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಮೀರ್ ಫಾರೂಕ್ ಮತ್ತು ನ್ಯಾಯಮೂರ್ತಿ ತಾರಿಕ್ ಮೆಹಮೂದ್ ಜಹಾಂಗಿರಿ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದ್ದು, ಎರಡೂ ಕಡೆಯ ವಕೀಲರು ಸಹ ನ್ಯಾಯಾಲಯದಲ್ಲಿ ಹಾಜರಿದ್ದಾರೆ ಎಂದು ಅಲ್ಲಿನ ’ಡಾನ್’ ಪತ್ರಿಕೆ ವರದಿ ಮಾಡಿದೆ.
ಮತ್ತೊಂದೆಡೆ, ಪಾಕಿಸ್ತಾನದ ಚುನಾವಣಾ ಆಯೋಗ ಪ್ರತಿನಿಧಿಸುವ ವಕೀಲ ಅಮ್ಜದ್ ಪರ್ವೇಜ್ ಅನಾರೋಗ್ಯದ ಕಾರಣದಿಂದ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಇದರಿಂದ ವಿಭಾಗೀಯ ನ್ಯಾಯಪೀಠವು ವಿಚಾರಣೆಯನ್ನು ಶುಕ್ರವಾರ ಮುಂದೂಡಿತ್ತು.
ವಕೀಲರು ಪದೇ ಪದೇ ಗೈರು ಹಾಜರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠವು ವಿಚಾರಣೆಗೆ ಯಾರೂ ಹಾಜರಾಗದಿದ್ದರೂ ಸೋಮವಾರ ಪ್ರಕರಣ ಇತ್ಯರ್ಥಪಡಿಸುವುದಾಗಿ ಪ್ರಕಟಿಸಿತ್ತು. ಅರ್ಜಿಯ ವಿಚಾರಣೆಯನ್ನು ಆ.೨೨ರಂದು ಪೀಠ ಆರಂಭಿಸಿತ್ತು.ಈ ಪ್ರಕರಣದಲ್ಲಿ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯವು ಪಾಕಿಸ್ತಾನ್ -ಎ- ಇನ್ಸಾಫ್ (ಪಿಟಿಐ) ಅಧ್ಯಕ್ಷರೂ ಆದ ಖಾನ್ ಅವರಿಗೆ ಆಗಸ್ಟ್ ೫ರಂದು ಶಿಕ್ಷೆ ವಿಧಿಸಿದ್ದು, ಸದ್ಯ ಖಾನ್ ಅವರು ಅಟಾಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!