ಉದಯವಾಹಿನಿ, ಲಂಡನ್ : ಬ್ರಿಟನ್‌ನ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ವ್ಯವಸ್ಥೆಯಲ್ಲಿ ಭಾರೀ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನೆಟ್ವರ್ಕ್ ಸಮಸ್ಯೆ ತಲೆದೋರಿದ್ದು ದೇಶದಾದ್ಯಂತ ವಿಮಾನ ನಿಲ್ದಾಣಗಳ ಹಾಗೂ ವಾಯುಯಾನ ಸಂಸ್ಥೆಗಳ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ನ್ಯಾಶನಲ್ ಏರ್ ಟ್ರಾಫಿಕ್ ಸೇವೆಗಳು ವಿಮಾನಗಳ ಲ್ಯಾಂಡಿಂಗ್ ಸಂಖ್ಯೆಯನ್ನು ಸೀಮಿತಗೊಳಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕರು ಯುಕೆ ಮತ್ತು ವಿದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಏರ್ ಟ್ರಾಫಿಕ್ ಕಂಟ್ರೋಲ್ ನೆಟ್ವರ್ಕ್ ವೈಫಲ್ಯದಿಂದಾಗಿ ವಿಮಾನ ಸಂಚಾರ ವಿಳಂಬವಾಗಲಿದೆ ಎಂದು ವಿಮಾನ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ. ಸಮಸ್ಯೆ ಬೆಳಕಿಗೆ ಬಂದ ಗಂಟೆಗಳ ಒಳಗೆ ಪರಿಹಾರ ಕಂಡುಕೊಂಡಿದ್ದರೂ ವಿಳಂಭ ಮತ್ತೆ ಮುಂದುವರೆದಿದೆ ಎನ್ನಲಾಗಿದೆ. ಕೆಲವೊಂದು ಮೂಲಗಳ ಪ್ರಕಾರ ಪ್ರಸಕ್ತ ಸಮಸ್ಯೆ ಕೆಲವೊಂದು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ನಾವು ಪ್ರಸ್ತುತ ತಾಂತ್ರಿಕ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಂಚಾರ ವ್ಯವಸ್ಥೆಯ ನಿರ್ಬಂಧಗಳನ್ನು ಅನ್ವಯಿಸಿದ್ದೇವೆ.
