ಉದಯವಾಹಿನಿ ಕುಶಾಲನಗರ : ಇದೇ ಆಗಸ್ಟ್, 30 ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ‘ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು, ಈ ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಮುಂದಾಗುವ0ತೆ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹಲಕ್ಷ್ಮಿ
ಯೋಜನೆ ಚಾಲನೆಯ ಮಾಹಿತಿ ಪಡೆದು ಸಚಿವರು ಮಾತನಾಡಿದರು.ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಯಜಮಾನಿ ಮಹಿಳೆಗೆ 2 ಸಾವಿರ ರೂ. ವನ್ನು ನೇರ ನಗದು ಮೂಲಕ ತಲುಪಿಸುವ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಇದೊಂದು ರಾಜ್ಯ ಮಟ್ಟದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್, ೩೦ ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಇರಬೇಕು. ಆ ನಿಟ್ಟಿನಲ್ಲಿ ಪ್ರತೀ ಗ್ರಾ.ಪಂ.ನಿ0ದ ಆಗಮಿಸುವ ಫಲಾನುಭವಿಗಳ ಪಟ್ಟಿಯನ್ನು ಖಾತರಿಪಡಿಸಿಕೊಳ್ಳುವಂತೆ ಸಚಿವರಾದ ಎನ್.ಎಸ್.ಭೋಸರಾಜು ಅವರು ಹೇಳಿದರು.ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಕಲ್ಪಿಸುವಂತೆ ಸಚಿವರು ನಿರ್ದೇಶನ ನೀಡಿದರು. ‘ಶಾಸಕರಾದ ಡಾ.ಮಂತರ್ ಗೌಡ ಅವರು ಮಾತನಾಡಿದರು.ಗ್ರಾ.ಪಂ.ಜೊತೆಗೆ ಮಡಿಕೇರಿ ನಗರ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣಗಳಿಂದಲೂ ಬಸ್ ವ್ಯವಸ್ಥೆ ಮಾಡುವಂತೆ ಶಾಸಕರು ಸಲಹೆ ಮಾಡಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ನೋಡಲ್ ಅಧಿಕಾರಿಗಳಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಕಾರ್ಯದರ್ಶಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ನಟರಾಜ ಅವರು ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ಶೇ.81.14 ರಷ್ಟು ಸಾಧನೆ ಮಾಡಲಾಗಿದೆ ಎಂದರು. ಮಡಿಕೇರಿ ತಾಲ್ಲೂಕಿನಿಂದ 1300 ಮಂದಿ, ಸೋಮವಾರಪೇಟೆ ತಾಲ್ಲೂಕಿನಿಂದ 1150, ಕುಶಾಲನಗರ ತಾಲ್ಲೂಕಿನಿಂದ 800, ಪೊನ್ನಂಪೇಟೆ ತಾಲ್ಲೂಕಿನಿಂದ 1150, ವಿರಾಜಪೇಟೆ ತಾಲ್ಲೂಕಿನಿಂದ 850 ಒಟ್ಟು 5150 ಮಂದಿ ಗೃಹಲಕ್ಷ್ಮಿ ಯೋಜನಾ ಫಲಾನುಭವಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ನಿಯೋಜಿಸಲ್ಪಟ್ಟ ಫಲಾನುಭವಿಗಳಿಗೆ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ, ಕಾಫಿ, ಬಿಸ್ಕೇಟ್, ವಾಟರ್ ಬಾಟಲ್‌ನ್ನು ನೋಡಲ್ ಅಧಿಕಾರಿಗಳು ಒದಗಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಜಯಕರಶೆಟ್ಟಿ ಅವರು ಮಾಹಿತಿ ನೀಡಿ ಒಟ್ಟು 103 ಗ್ರಾ.ಪಂ.ಗಳಿಗೆ ಬಸ್‌ನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತೀ ಗ್ರಾ.ಪಂ.ನಿ0ದ ೫೦ ಮಂದಿ ಫಲಾನುಭವಿಗಳನ್ನು ಕಳುಹಿಸಲಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗೃಹಲಕ್ಷ್ಮಿ ಯೋಜನೆ ಸಂಬ0ಧ ಹಲವು ಮಾಹಿತಿ ನೀಡಿದರು.
