ಉದಯವಾಹಿನಿ ಶಿಡ್ಲಘಟ್ಟ: ಕ್ರೀಡೆಗಳಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವ ಜೊತೆಗೆ ಸೌರ್ಹಾದತೆ ಬೆಳೆಯುತ್ತದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು. ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ 2023-24 ನೇ ಸಾಲಿನ ತಾಲೂಕು ಮಟ್ಟದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪಾಠ ಪ್ರವಚನಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿದ್ದರೆ ವಿದ್ಯಾರ್ಥಿಗಳ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಪೋಷಕರು ಮಕ್ಕಳ ಮೇಲೆ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಮಕ್ಕಳಿಗಾಗಿ ಸಾಕಷ್ಟು ತ್ಯಾಗ ಮಾಡುತ್ತಾರೆ. ವಿದ್ಯಾರ್ಥಿಗಳು ತಾಯಿತಂದೆ ಮತ್ತು ಗುರುವಿಗೆ ಗೌರವತರಬೇಕು. ಉನ್ನತ ಸಾಧನೆ ಮಾಡಿ ಕೀರ್ತಿ ತರಬೇಕು ಎಂದರು.ತಾಲೂಕಿನ ಸುಮಾರು 17 ಕಾಲೇಜುಗಳಿಂದ ಪ್ರಥಮ ಮತ್ತು ಕ್ರೀಡಾಕೂಟ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಕ್ರೀಡಾಕೂಟದಲ್ಲಿ ಎಲ್ಲರೂ ವಿಜೇತರಾಗಲು ಸಾಧ್ಯವಿಲ್ಲ. ಸ್ಪರ್ಧಾಮನೋಭಾವದಿಂದ ಸೋಲು ಗೆಲುವನ್ನು ಸ್ವೀಕರಿಸಿ. ಸೋಲೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯದಿರಿ ಎಂದು ಹೇಳಿದರು.ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕು ಮಟ್ಟದಿಂದ ಜಿಲ್ಲಾಮಟ್ಟ, ರಾಜ್ಯ ಮಟ್ಟ ರಾಷ್ಟ್ರಮಟ್ಟದ ವರೆಗೆ ಬೆಳೆದು ತೋರಿಸಬೇಕು ಎಂದರು. ಶಾಸಕ ಬಿ.ಎನ್.ರವಿಕುಮಾರ್ ಅವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ, ಪಾರಿವಾಳವನ್ನು ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವೆಂಕಟಶಿವಾರೆಡ್ಡಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಮುನಿರೆಡ್ಡಿ, ದೈಹಿಕ ಪರಿವೀಕ್ಷಕ ದೇವೇಂದ್ರಪ್ಪ, ಅಕ್ಷರ ಕಾಲೇಜಿನ ಪ್ರಕಾಶ್, ಹೆಚ್.ವಿ.ಶಿವಾರೆಡ್ಡಿ, ಡಿ.ದೀಪಕ್, ಎ.ಆರ್.ಎಂ.ಕಾಲೇಜು ಪ್ರಾಂಶುಪಾಲ ಮೂರ್ತಿಸಾಮ್ರಾಟ್, ತಾದೂರು ರಘು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!