
ಉದಯವಾಹಿನಿ ದೇವನಹಳ್ಳಿ: ಮಹಿಳಾ ಸಬಲೀಕರಣಕ್ಕೆ ಸರಕಾರ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗಿಳಿಸುತ್ತಿರುವುದು ನಾಡಿನ ಅನೇಕ ಮಹಿಳೆಯರಿಗೆ ವರದಾನವಾಗಲಿದ್ದು ಅದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಆವತಿ ಗ್ರಾಮಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ ತಿಳಿಸಿದರು.
ತಾಲೂಕಿನ ಆವತಿ ಗ್ರಾಮಪಂಚಾಯತಿ ವತಿಯಿಂದ ಗಂಗಾಪರಮೇಶ್ವರಿ ಸಮುದಾಯಭವನದಲ್ಲಿ ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನ ನೇರಪ್ರಸಾರ ಕಾರ್ಯಕ್ರಮಕ್ಕೆ ವೀಕ್ಷಣೆಗೆ ಚಾಲನೆ ನೀಡಿ ಮಾತನಾಡಿದ ಅವರು. ಚುನಾವಣೆ ಸಮಯದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ 4 ಯೋಜನೆಗಳು ಈಗಾಗಲೇ ಅನುಷ್ಠಾನಗೊಂಡಿದೆ ಅದರಲ್ಲಿ ಪ್ರಮುಖವಾದ ಯೋಜನೆ ಗೃಹಲಕ್ಷ್ಮೀ ಯೋಜನೆ ಈ ಯೋಜನೆಯಿಂದ ಅನೇಕ ಮಹಿಳೆಯರಿಗೆ ಅನುಕೂಲವಾಗಲಿದೆ. ಕುಟುಂಬದ ಯಜಮಾನಿ ಖಾತೆಗೆ ಮಾಸಿಕ 2 ಸಾವಿರ ರೂ ಹಣ ವರ್ಗಾವಣೆಯಾಗಲಿದೆ. ರಾಜ್ಯದಲ್ಲಿ ಬಡವರು ಯಾರು ಇರಬಾರದು ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಈ ಯೋಜನೆ ಜಾರಿಗೆ ತಂದಿದ್ದಾರೆ. ಮಹಿಳೆಯರ ಸರ್ವಾಂಗಿಣ ಅಭಿವೃದ್ಧಿ ಸರಕಾರದ ಉದ್ದೇಶವಾಗಿದೆ. ಹಾಗೂ ಶಕ್ತಿ ಯೋಜನೆಯೂ ಸಹ ಮಹಿಳೆಯರಿಗೆ ವರದಾನವಾಗಿದೆ. ಸರಕಾರದ ಎಲ್ಲಾ ಸೌಲಭ್ಯಗಳನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದಬರಬೇಕು ಎಂದರು. ಇದೆ ವೇಳೆ ಆವತಿ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸೌಭಾಗ್ಯಮ್ಮ, ಸದಸ್ಯರಾದ ನರಸಪ್ಪ, ನರಸಿಂಹಮೂರ್ತಿ, ಪ್ರೇಮನಾಗರಾಜ್, ಶೋಭಬಸವರಾಜ್, ಮಾಲ, ಆಂಜಿನಮ್ಮ, ನಾರಾಯಣಸ್ವಾಮಿ, ಪಿಡಿಓ ಚನ್ನಪ್ಪ, ಕಾರ್ಯದರ್ಶಿ ರಾಘವೇಂದ್ರ, ಮುಖಂಡರಾದ ರಾಧಮ್ಮ, ಗೋಪಾಲಕೃಷ್ಣ, ವೆಂಕಟೇಶ್, ಮಂಜುನಾಥ್ ಗ್ರಾಮಸ್ಥರು, ಮಹಿಳೆಯರು ಇದ್ದರು.
