ಉದಯವಾಹಿನಿ, ಮುಂಬೈ: ವಿರೋಧ ಪಕ್ಷಗಳ ನಾಯಕರ ಸಭೆ ಕರೆಯದೆ ಅವರ ಆಭಿಪ್ರಾಯ ಆಲಿಸದೆ ಕೇಂದ್ರ ಸರ್ಕಾರ ಏಕಾಏಕಿ ಸಂಸತ್ತಿನ ವಿಶೇಷ ಅಧಿವೇಶನ ಕರೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರವಾಗಿದ್ದಾರೆ.
ಪ್ರತಿಪಕ್ಷಗಳ ಯಾರನ್ನೂ ಕೇಳದೆ, ಸಂಸತ್ತಿನ ವಿಶೇಷ ಅಧಿವೇಶನ ಕರೆಯಲಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ಚೀನಾದ ವಿಷಯ ಅಥವಾ ನೋಟು ಅಮಾನ್ಯೀಕರಣದ ವಿಷಯಗಳ ಬಗ್ಗೆ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಿಲ್ಲ ಎಂದು ಪ್ರಧಾನಿ ವಿರುದ್ಧ ನೇರವಾಗಿ ಅವರು ವಾಗ್ದಾಳಿ ಮಾಡಿದ್ದಾರೆ.
ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ಬಳಿಕ ಮಾತನಾಡಿದ ಅವರು ವಲಸೆ ಕಾರ್ಮಿಕರು ಸಮಸ್ಯೆಯಲ್ಲಿದ್ದಾಗ ಇವರಿಗೆ ವಿಶೇಷ ಅಧಿವೇಶನ ಕರೆಯಬೇಕು ಎಂದು ಅನಿಸಲಿಲ್ಲ ಎಂದು ದೂರಿದ್ದಾರೆ.ಏಕಾಏಕಿ ವಿಶೇಷ ಅಧಿವೇಶನ ಕರೆದಿರುವ ಕೇಂದ್ರ ಸರ್ಕಾರದ ಉದ್ದೇಶ ಏನು ಎಂಬುದು ತಮಗೆ ಅರ್ಥವಾಗಿಲ್ಲ.ಅದಿವೇಶನದ ಅಜೆಂಡಾ ಏನು ಎನ್ನುವುದು ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ರೀತಿಯ ನಡೆ ದೇಶವನ್ನು ನಡೆಸುವ ಮಾರ್ಗವಲ್ಲ. ನಿಧಾನವಾಗಿ ಸರ್ವಾಧಿಕಾರದ ಕಡೆಗೆ ಹೋಗುತ್ತಿದ್ದೇವೆ ಎನ್ನುವುದರ ಸೂಚಕವಾಗಿದೆ ಎಂದು ಆರೋಪಿಸಿದ್ದಾರೆ.
