ಉದಯವಾಹಿನಿ, ಲಂಡನ್: ರಷ್ಯಾದ ಬಾಡಿಗೆ ಸೇನಾಪಡೆ ವ್ಯಾಗ್ನರ್ ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ನಿಷೇಧಿಸಲು ನಿರ್ಧಿರಿಸದೆ. ಪರಿಣಾಮ ಇನ್ನು ಮುಂದೆ ವ್ಯಾಗ್ನರ್ ಸಂಘಟನೆಯ ಸದಸ್ಯರಾಗಿರುವುದು ಅಥವಾ ಬೆಂಬಲಿಸುವುದು ಕಾನೂನು ಬಾಹಿರವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ರಿಟನ್‌ನ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್ಮನ್, ಹಿಂಸಾತ್ಮಕ ಮತ್ತು ವಿನಾಶಕಾರಿ ಆಗಿರುವ ವ್ಯಾಗ್ನರ್ ಗುಂಪು ವ್ಲಾದಿಮಿರ್ ಪುಟಿನ್ ಅವರ ರಷ್ಯಾದ ಮಿಲಿಟರಿ ಸಾಧನವಾಗಿದೆ. ಉಕ್ರೇನ್ ಹಾಗೂ ಆಫ್ರಿಕಾದಲ್ಲಿ ವ್ಯಾಗ್ನರ್‌ನ ಕೆಲಸವು ಜಾಗತಿಕ ಭದ್ರತೆಗೆ ಬೆದರಿಕೆಯಾಗಿದೆ. ರಷ್ಯಾದ ರಾಜಕೀಯ ಚಟುವಟಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾತ್ರ ವ್ಯಾಗ್ನರ್ ಗುಂಪು ಮುಂದುವರೆಸುತ್ತಿದೆ. ಅವರು ಭಯೋತ್ಪಾದಕರಾಗಿದ್ದಾರೆ. ಈ ನಿಷೇಧದ ಆದೇಶವು ಯುಕೆ ಕಾನೂನಿನಲ್ಲಿ ಅದನ್ನು ಸ್ಪಷ್ಟಪಡಿಸಲಿದೆ ಎಂದು ತಿಳಿಸಿದ್ದಾರೆ. ಸಂಸತ್ತಿನಲ್ಲಿ ಹಾಕಲಾಗುವ ಕರಡು ಆದೇಶವು ಮುಂದೆ ವ್ಯಾಗ್ನರ್ ಗುಂಪಿಗೆ ಸೇರಿದ ಆಸ್ತಿಗಳನ್ನು ಭಯೋತ್ಪಾದಕ ಆಸ್ತಿ ಎಂದು ವರ್ಗೀಕರಿಸಲು ಮತ್ತು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಉಕ್ರೇನ್ ಮೇಲಿನ ದಾಳಿಯಲ್ಲಿ ವ್ಯಾಗ್ನರ್ ಗುಂಪು ಪ್ರಮುಖ ಪಾತ್ರ ನಿರ್ವಹಿಸಿತ್ತು. ಅದೂ ಅಲ್ಲದೆ ಈ ಗುಂಪಿನ ಸದಸ್ಯರು ಕೂಡ ಲಿಬಿಯಾ, ಮಾಲಿ, ಸಿರಿಯಾ ಸೇರಿದಂತೆ ಆಫ್ರಿಕಾದ ಹಲವೆಡೆ ರಷ್ಯಾ ಪರ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದು ಅಮೆರಿಕಾ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ತಲೆನೋವು ಉಂಟು ಮಾಡಿದೆ. ಇನ್ನು ಇತ್ತೀಚಿಗೆ ವ್ಯಾಗ್ನರ್ ಗುಂಪಿನ ಮುಖ್ಯಸ್ಥ ಯಾವ್ಗೆನಿ ಪ್ರಿಗೊಝಿನ್ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.
