ಉದಯವಾಹಿನಿ, ಜೆರುಸಲೇಂ: ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗಾಝಾದಿಂದ ಎಲ್ಲಾ ರೀತಿಯ ಆಮದನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಮತ್ತು ರಕ್ಷಣಾ ಸಚಿವಾಲಯ ಹೇಳಿದೆ.
ಇತ್ತೀಚೆಗೆ ಕೆರೆಮ್ ಶಲೋಮ್ ಗಡಿದಾಟು (ಕ್ರಾಸಿಂಗ್)ನಲ್ಲಿ ಮೂರು ಟ್ರಕ್‌ಗಳಲ್ಲಿ ತುಂಬಿಸಿದ್ದ ಜವಳಿಯ ಸರಕಿನಡಿ ಭಾರೀ ಪ್ರಮಾಣದ ಅತ್ಯಾಧುನಿಕ ಸ್ಫೋಟಕ ವಸ್ತುಗಳನ್ನು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಗಡಿಪ್ರದೇಶದ ಗಡಿದಾಟುಗಳನ್ನು ಇಸ್ರೇಲ್‌ನ ರಕ್ಷಣಾ ಇಲಾಖೆ ನಿಯಂತ್ರಿಸುತ್ತಿದೆ. ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್‌ರ ಅನುಮೋದನೆ ಪಡೆದು ರಕ್ಷಣಾ ಸಿಬಂದಿ ವಿಭಾಗದ ಮುಖ್ಯಸ್ಥ ಹೆರ್ಝೆಯ್ ಹಲೇವಿ ಗಾಝಾದಿಂದ ಇಸ್ರೇಲ್‌ಗೆ ವಾಣಿಜ್ಯ ವಿತರಣೆಗಳ ಸ್ಥಗಿತಕ್ಕೆ ಆದೇಶಿಸಿದ್ದಾರೆ. ಇದು ಗಡಿದಾಟಿನಲ್ಲಿ ಭದ್ರತಾ ವ್ಯವಸ್ಥೆಯ ಹೊಂದಾಣಿಕೆಗೆ ಅನುವು ಮಾಡಿಕೊಡುತ್ತದೆ.
