ಉದಯವಾಹಿನಿ, ಮುಂಬೈ : ‘ಭಾರತ’, ‘ಇಂಡಿಯಾ’ ಹೆಸರುಗಳ ಕುರಿತು ತುರುಸಿನ ಚರ್ಚಿನ ನಡೆದಿರುವ ಈ ಸಂದರ್ಭದಲ್ಲೇ ದೇಶದ ಹೆಸರಿನ ಕುರಿತು ಪ್ರತಿಕ್ರಿಯಿಸಿರುವ ಆರ್‌ಎಸ್‌ಎಸ್‌, ‘ನಮ್ಮ ದೇಶದ ಹೆಸರು ಭಾರತ. ಅದು ಭಾರತ ಎಂದೇ ಇರಬೇಕು’ ಎಂದು ಪ್ರತಿಪಾದಿಸಿದೆ.
ಪುಣೆಯಲ್ಲಿ ನಡೆದ ಸಂಘಟನೆಯ ಮೂರು ದಿನಗಳ ಅಖಿಲ ಭಾರತೀಯ ಸಮನ್ವಯ ಬೈಠಕ್‌ನ ಸಮಾರೋಪ ಸಮಾರಂಭದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಡಾ.ಮನಮೋಹನ ವೈದ್ಯ, ಪ್ರಚಾರ ವಿಭಾಗದ ಮುಖ್ಯಸ್ಥ ಸುನಿಲ್‌ ಅಂಬೇಕರ್ ಈ ಪ್ರತಿಪಾದನೆ ಮಾಡಿದರು.

‘ಪ್ರಾಚೀನ ಕಾಲದಿಂದಲೂ ನಮ್ಮ ದೇಶ ಭಾರತ ಎಂಬ ಹೆಸರಿನಿಂದಲೇ ಪ್ರಸಿದ್ಧ. ಭಾರತ ಎಂಬುದಕ್ಕೆ ಒಂದು ಸಾಂಸ್ಕೃತಿಕ ಮೌಲ್ಯ ಇದೆ. ಎರಡು ಹೆಸರುಗಳನ್ನು ಹೊಂದಿರುವ ಯಾವ ದೇಶವೂ ಇಲ್ಲ. ಹಾಗಾಗಿ, ನಮ್ಮ ದೇಶ ಭಾರತ, ಈ ಹೆಸರಿನಿಂದಲೇ ಕರೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬಂತಹ ಹೇಳಿಕೆಗಳನ್ನು ನೀಡುತ್ತಿರುವವರು ಮೊದಲು ಈ ಪದದ ಅರ್ಥ ತಿಳಿದುಕೊಳ್ಳಬೇಕು’ ಎಂದು ವೈದ್ಯ ಪ್ರತಿಪಾದಿಸಿದರು.’ಸನಾತನ ಪದದ ಅರ್ಥ ಅನಂತ. ಇದುವೇ ಭಾರತದ ಆಧ್ಯಾತ್ಮಿಕ ಜೀವನ ಪದ್ಧತಿಯ ಬುನಾದಿ. ಸನಾತನ ಧರ್ಮದಿಂದಾಗಿಯೇ ವಿಶಿಷ್ಟ ಗುಣಗಳನ್ನು ಹೊಂದಿರುವ ಭಾರತ ರೂಪುಗೊಂಡಿದೆ’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!