ಉದಯವಾಹಿನಿ, ಕೊಲಂಬೊ(ಶ್ರೀಲಂಕಾ): ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ದನೌಕೆಯ ಮೇಲೆ ಅಮೆರಿಕ ನಡೆಸಿದ ಭೀಕರ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಇರಾನ್ ರಾಯಭಾರ ಕಚೇರಿಗೆ ಶ್ರೀಲಂಕಾ ಹಸ್ತಾಂತರಿಸಿದೆ.
ಭಾರತದ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನೌಕಾಭ್ಯಾಸಕ್ಕೆ ಆಗಮಿಸಿದ್ದ ಇರಾನ್‌ನ ಐಆರ್ಐಎಸ್ ಡೆನಾ ಯುದ್ಧ ನೌಕೆ ಸ್ವದೇಶಕ್ಕೆ ಮರಳುತ್ತಿದ್ದಾಗ ಮಾರ್ಚ್ 4ರಂದು ಶ್ರೀಲಂಕಾ ಬಳಿ ಅಮೆರಿಕದ ಪಡೆಗಳು ಜಲಾಂತರ್ಗಾಮಿ ಮೂಲಕ ದಾಳಿ ನಡೆಸಿದ್ದವು. ಈ ಭೀಕರ ದಾಳಿಯಲ್ಲಿ 84 ನಾವಿಕರು ಮೃತಪಟ್ಟಿದ್ದರು.
ಬದುಕುಳಿದವರನ್ನು ಮತ್ತು ಸಾವನ್ನಪ್ಪಿದ್ದ ನಾವಿಕರನ್ನು ಶ್ರೀಲಂಕಾದ ದಕ್ಷಿಣದ ಗ್ಯಾಲೆಯಲ್ಲಿರುವ ಕರಪಿಟಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬದುಕುಳಿದ 32 ನಾವಿಕರನ್ನು ಚಿಕಿತ್ಸೆಯ ಬಳಿಕ ಭಾನುವಾರ ಬಿಡುಗಡೆ ಮಾಡಿ ಗ್ಯಾಲೆಯ ಕೊಗ್ಗಲದಲ್ಲಿರುವ ವಾಯುನೆಲೆಗೆ ಕಳುಹಿಸಲಾಗಿತ್ತು.
ಈ ಹಿಂದೆ, ಇರಾನ್‌ನ ಪರಿಸ್ಥಿತಿ ಸುಧಾರಿಸಿದ ನಂತರ ಶವಗಳನ್ನು ಕಳುಹಿಸಲಾಗುವುದು ಎಂದು ಶ್ರೀಲಂಕಾ ಸರ್ಕಾರ ತಿಳಿಸಿತ್ತು.
ಇದೀಗ ಎಲ್ಲಾ ದೇಶೀಯ ಕಾರ್ಯವಿಧಾನಗಳು ಪೂರ್ಣಗೊಂಡಿವೆ. ಶೈಥೀಕರಿಸಿರುವ ಶವಗಳ ಪೆಟ್ಟಿಗೆಗಳ ಮೊದಲ ಬ್ಯಾಚ್ ಈಗಾಗಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಇರಾನ್‌ನ ಚಾರ್ಟರ್ಡ್ ಕಾರ್ಗೋ ವಿಮಾನದಲ್ಲಿ ಕಳುಹಿಸಲಾಗುತ್ತಿದೆ.
ಭಾರತದಲ್ಲಿ ನೌಕಾಭ್ಯಾಸಕ್ಕೆ ಬಂದಿದ್ದ ನಾವಿಕರು: ಫೆಬ್ರವರಿ 18ರಿಂದ 25ರ ವರೆಗೆ ಆಂಧ್ರ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆ ಆಯೋಜಿಸಿದ್ದ MILAN 2026 ನೌಕಾಭ್ಯಾಸಕ್ಕೆ ಇರಾನ್‌ನ ಐಆರ್ಐಎಸ್ ಡೆನಾ ಯುದ್ಧ ನೌಕೆ ಬಂದಿತ್ತು. ಅಭ್ಯಾಸದ ಬಳಿಕ ಸ್ವದೇಶಕ್ಕೆ ಹಿಂತಿರುಗುತ್ತಿತ್ತು. ಈ ವೇಳೆ, ಶ್ರೀಲಂಕಾದ ಗ್ಯಾಲೆಯಿಂದ ಸುಮಾರು 44 ನಾಟಿಕಲ್ ಮೈಲು ದೂರದಲ್ಲಿ ಅಮೆರಿಕದ ಜಲಾಂತರ್ಗಾಮಿ ದಾಳಿಗೆ ತುತ್ತಾಗಿ ಸಂಪೂರ್ಣ ನಾಶವಾಗಿತ್ತು. 87 ನಾವಿಕರು ಮೃತಪಟ್ಟರೆ, ಹಲವರು ಕಣ್ಮರೆಯಾಗಿದ್ದರು. ಅಮೆರಿಕದ ಜಲಾಂತರ್ಗಾಮಿ ನೌಕೆ ತನ್ನ ಯುದ್ಧ ಹಡಗನ್ನು ಶ್ರೀಲಂಕಾದ ಬಳಿ ಹೊಡೆದುರುಳಿಸಿರುವುದನ್ನು ಇರಾನ್ ಕೂಡ ಒಪ್ಪಿಕೊಂಡಿತ್ತು. ಇದಕ್ಕಾಗಿ ಅಮೆರಿಕ ತಕ್ಕಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
