ಉದಯವಾಹಿನಿ, ಟೆಹ್ರಾನ್ : ಇರಾನ್-ಇಸ್ರೇಲ್-ಯುಎಸ್ ನಡುವಿನ ಯುದ್ಧ ಶುರುವಾಗಿ 13 ದಿನ ಕಳೆದಿದೆ. ಇಸ್ರೇಲ್ನ ಕೆಲವು ಭಾಗಗಳು ಮತ್ತು ಜೇರುಸಲೇಂ ಮೇಲೆ ಇರಾನ್ ದಾಳಿ ಮುಂದುವರೆಸಿದೆ. ವಿಶ್ವದ ಅತ್ಯಂತ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡಿದ್ದು, ವಾಣಿಜ್ಯ ಹಡಗುಗಳ ಮೇಲೂ ದಾಳಿ ನಡೆಸಿದೆ. ಯುದ್ಧ ನಿಲ್ಲಿಸುವಂತೆ ಅಮೆರಿಕ ಮತ್ತು ಇಸ್ರೇಲ್ ಮೇಲೆ ಇರಾನ್ ಸಾಕಷ್ಟು ಜಾಗತಿಕ ಆರ್ಥಿಕ ಒತ್ತಡ ಹೇರುವ ಗುರಿ ಹೊಂದಿದ್ದು, ತೈಲ ಬೆಲೆ ಏರಿಕೆಯನ್ನೇ ಇದೀಗ ಗುರಿಯಾಗಿಸಿಕೊಂಡಿದೆ.
ತಮ್ಮ ಇಸ್ಲಾಮಿಕ್ ಗಣರಾಜ್ಯದ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಮೆರಿಕ ವಿಷಾದಿಸುವಂತೆ ಮಾಡುವ ಪಣವನ್ನು ಇರಾನ್ ತೊಟ್ಟಿದೆ. ಇದೇ ವೇಳೆ, ಹಾರ್ಮುಜ್ ಜಲಮಾರ್ಗದ ಮೇಲೆ ಹಿಡಿತ ಸಾಧಿಸುವ ಮೂಲಕ ತೈಲ ಬೆಲೆಗಳನ್ನು ಗಗನಕ್ಕೇರಿಸುವ ಪ್ರತಿಜ್ಞೆ ಮಾಡಿದೆ.
ಯುದ್ದ ಈಗಾಗಲೇ ಜಾಗತಿಕವಾಗಿ ತೈಲ ಪೂರೈಕೆಗೆ ಅಡ್ಡಿಪಡಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಅತೀ ದೊಡ್ಡ ಸರಕು ಸಾಗಣೆ ಪೂರೈಕೆಗೆ ಅಡಚಣೆಯಾಗಿದೆ ಎಂದು ಅಂತಾರಾಷ್ಟ್ರೀಯ ಇಂಧನ ಸಂಸ್ಥೆ ಎಚ್ಚರಿಸಿದೆ.
ಇದಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಇರಾನ್ ಸೋಲಿಸುವುದು ಕಚ್ಛಾ ತೈಲ ಬೆಲೆಗಳಿಗಿಂತ ಮುಖ್ಯ ಎಂದು ತಿಳಿಸಿದ್ದಾರೆ.
ಅಮೆರಿಕಕ್ಕೆ ತಿರುಗೇಟು ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ಯುದ್ಧ ಆರಂಭಿಸುವುದು ಸುಲಭ. ಕೆಲವು ಟ್ವೀಟ್‌ಗಳ ಮೂಲಕ ಅದನ್ನು ಗೆಲ್ಲಲು ಸಾಧ್ಯವಿಲ್ಲ. ತಪ್ಪು ಲೆಕ್ಕಾಚಾರಕ್ಕೆ ನೀವು ವಿಷಾದಪಡುವಂತೆ ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ.
ಇರಾನ್‌ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ, ಸೇಡಿನ ಕುರಿತು ಮಾತನಾಡಿ ಬೆನ್ನಲ್ಲೇ ಇರಾನ್ ಅಧಿಕಾರಿಗಳಿಂದ ಈ ಹೇಳಿಕೆ ಹೊರಬಿದ್ದಿದೆ. ಇರಾನ್ ಈಗಾಗಲೇ ಈ ಪ್ರದೇಶಗಳಲ್ಲಿ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿದ್ದು, ತೈಲ ಮತ್ತು ಅನಿಲ ವಲಯವನ್ನು ಅಡ್ಡಿಪಡಿಸಲಿದೆ ಎಂದು ಎಚ್ಚರಿಸಿದೆ.
