ಉದಯವಾಹಿನಿ, ಬೀದರ್ : ಸಮಾಜದ ಹಿತಕ್ಕಾಗಿ ಸಮರ್ಪಣಾ ಭಾವದಿಂದ ದುಡಿದ ಮಹದೇವಪ್ಪ ಮೀಸೆ ಅವರು ತಮ್ಮ ಸರ್ವಸ್ವವನ್ನೇ ಸಮಾಜದ ಉನ್ನತಿಗಾಗಿ ಧಾರೆ ಎರೆಯುವ ಮೂಲಕ ಮಹಾನ್ ತ್ಯಾಗಿಯಾಗಿ ಹೆಸರಾಗಿದ್ದಾರೆ. ಗಾಂಧೀಜಿ ಹಾಗೂ ವಿನೋಬಾ ಭಾವೆ ಯವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು ಎಂದು ಬೀದರ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಪರಮೇಶ್ವರ್ ನಾಯಕ್ ತಿಳಿಸಿದರು .ನಗರದ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಕರುನಾಡು ಸಾಂಸ್ಕೃತಿಕ ಸಭಾಂಗಣದಲ್ಲಿ  ಏರ್ಪಡಿಸಿದ “ತ್ಯಾಗಜೀವಿ ಮಹದೇವಪ್ಪ ಮೀಸೆಯವರ ಸ್ಮರಣೋತ್ಸವ ಕಾರ್ಯಕ್ರಮ”ವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತಿ ಡಾ. ರಾಮಚಂದ್ರ ಗಣಾಪೂರ್ ವಿಶೇಷ ಉಪನ್ಯಾಸ ನೀಡಿ  ಭೂದಾನ ಚಳುವಳಿಯಲ್ಲಿ ವಿನೋಬಾ ಭಾವೆಯವರ ಜೊತೆಗೂಡಿ ಅನೇಕ ಹೋರಾಟ ಮಾಡಿದ ಮೀಸೆಯವರು ನಿಷ್ಠುರ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದರು. ಸರ್ವೋದಯ ಚಳುವಳಿ, ಗೋಕಾಕ್ ಚಳುವಳಿ ಸೇರಿದಂತೆ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಕಲ್ಯಾಣದಲ್ಲಿನ ಅನುಭವ ಮಂಟಪ ನಿರ್ಮಾಣದಲ್ಲಿ ಗಣನೀಯ ಪಾತ್ರ ನಿರ್ವಹಿಸಿದ್ದರು ಎಂದು ವಿವರಿಸಿದರು. ಪ್ರಾಸ್ತಾವಿಕವಾಗಿ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷ ಡಾ. ಸಂಜೀವಕುಮಾರ್ ಅತಿವಾಳೆ ಮಾತನಾಡುತ್ತಾ ಸಮಾಜದ ಉದ್ದಾರಕ್ಕಾಗಿ ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟಿ ಶ್ರಮಿಸಿದ ಅನೇಕ ಜನ ಮಹಾಪುರುಷರ ಜನ್ಮದಿನೋತ್ಸವ ,ಸ್ಮರಣೋತ್ಸವ ಮಾಡುವ ಮೂಲಕ ಅವರ ಕೊಡುಗೆಯನ್ನು ಮುಂದಿನ ಪೀಳಿಗೆಗೆ ತಿಳಿಸುವಂತಹ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಮಹದೇವಪ್ಪ ಮೀಸೆ ಅವರು ಸರಳ ಹಾಗೂ ಸಾತ್ವಿಕ ಜೀವನವನ್ನು ಸಾಗಿಸುತ್ತ ಆದರ್ಶ ಸಮಾಜ ನಿರ್ಮಾಣದಲ್ಲಿ ಎಲೆಮರೆ ಕಾಯಿಯಂತೆ ಇದ್ದು ದುಡಿದಿದ್ದಾರೆ ಅವರ ಕಾರ್ಯ ನಿರಂತರವಾಗಿ ಸ್ಮರಿಸುವಂತಹದ್ದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಉಮಕಾಂತ ಮೀಸೆ, ಸಾಹಿತಿ ಶಿವಲಿಂಗ ಹೇಡೆ ಮಹದೇವಪ್ಪ ಮೀಸೆ ಅವರ ಮೊಮ್ಮಗ ಆನಂದ್ ಮೀಸೆ ಆಗಮಿಸಿ ಮೀಸೆಯವರ ಸೇವೆ ಸಾಧನೆ ಜೀವನದ ಕುರಿತಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನೀಡುವ 2023 ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಡಾ.ಸಂಜೀವಕುಮಾರ್ ಅತಿವಾಳೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಕೀಲ್ ಅಹಮದ್ ಪಟೇಲ್ ಹಾಗೂ ರವಿದಾಸ್ ಕಾಂಬಳೆ ತತ್ವಪದ ಗಾಯನ ಮಾಡಿದರು. ನಾಗನಾಥ ಬಿರಾದಾರ್ ಸ್ವಾಗತಿಸಿದರು, ಲಕ್ಷ್ಮಣ ಮೇತ್ರೆ ನಿರೂಪಿಸಿದರು, ಸೂರ್ಯಕಾಂತ ನಿರ್ಣಾಕರ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!