
ಉದಯವಾಹಿನಿ, ಬೇಸಿಗೆಯ ಜಳ ಹೆಚ್ಚಾಗಿದೆ, ಸೂರ್ಯ ನೆತ್ತಿಗೆ ಏರೋ ಮುನ್ನವೇ ಧಗೆ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ದೇಹಕ್ಕೆ ತಂಪು ನೀಡುವ, ದಣಿವು ಕಡಿಮೆ ಮಾಡುವ ಕೂಲ್ ಕೂಲ್ ಪಾನೀಯಗಳು ಎಲ್ಲರಿಗೂ ಬೇಕಾಗುತ್ತವೆ. ವಿಶೇಷವಾಗಿ ಆರೋಗ್ಯಕ್ಕೂ ಒಳ್ಳೆಯದು, ದೇಹವನ್ನು ಹೈಡ್ರೇಟ್ ಆಗಿರಿಸುವ ನೈಸರ್ಗಿಕ ಪಾನೀಯಗಳು ಬೇಸಿಗೆಯಲ್ಲಿ ಹೆಚ್ಚು ಉಪಯುಕ್ತವಾಗುತ್ತವೆ. ಬೇಸಿಗೆಯಲ್ಲಿ ದೇಹದಲ್ಲಿ ಉರಿಯೂತ, ದಣಿವು ಮತ್ತು ನೀರಿನ ಕೊರತೆ ತುಂಬಾ ಸಾಮಾನ್ಯ. ಈ ಸಮಯದಲ್ಲಿ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ದೇಹಕ್ಕೆ ತಂಪು ನೀಡುವುದಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತವೆ.
ವಿಶೇಷವಾಗಿ ಉತ್ಕರ್ಷಣ ನಿರೋಧಕಗಳು ಮತ್ತು ನೈಸರ್ಗಿಕ ಪೋಷಕಾಂಶಗಳಿಂದ ಕೂಡಿದ ಪಾನೀಯಗಳು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಹಾಗೂ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತವೆ.
1. ಅರಿಶಿನ ನಿಂಬೆ ಪಾನಕ
ತಾಜಾ ನಿಂಬೆ ರಸ, ಜೇನುತುಪ್ಪ ಮತ್ತು ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಿ ತಯಾರಿಸುವ ಈ ಪಾನೀಯ ದೇಹಕ್ಕೆ ತಂಪು ನೀಡುತ್ತದೆ. ಅರಿಶಿನದಲ್ಲಿರುವ ಉರಿಯೂತ ನಿವಾರಕ ಗುಣಗಳು ದೇಹದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ನಿಂಬೆ ದೇಹಕ್ಕೆ ಬೇಕಾದ ವಿಟಮಿನ್-ಸಿ ಒದಗಿಸುತ್ತದೆ.
2. ಶುಂಠಿ-ಪುದೀನ ಐಸ್ಡ್ ಟೀ
ಈ ಟೀ ಕೂಡ ನಿಮ್ಮ ದೇಹವನ್ನು ತಂಪು ತಂಪು ಕೂಲ್ ಆಗಿಸುತ್ತದೆ. ಶುಂಠಿ ಚಹಾಗೆ ತಾಜಾ ಪುದೀನ ಎಲೆಗಳು ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ತಣ್ಣಗಾಗಿಸಿದರೆ ರಿಫ್ರೆಶ್ ಪಾನೀಯ ಸಿದ್ಧವಾಗುತ್ತದೆ. ದೇಹವನ್ನು ತಂಪಾಗಿಸುವುದರ ಜೊತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
3. ಕಲ್ಲಂಗಡಿ-ತುಳಸಿ ಕೂಲರ್
ಬೇಸಿಗೆಯಲ್ಲಿ ಕಲ್ಲಂಗಡಿಗಿಂತ ಬೆಸ್ಟ್ ಹಣ್ಣು ಮತ್ತ್ಯಾವುದು ಹೇಳಿ. ಈ ಹಣ್ಣಿನ ಜೊತೆ ತಾಜಾ ತುಳಸಿ ಎಲೆಗಳನ್ನು ಸ್ವಲ್ಪ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿದರೆ ನಿಮಗೆ ಹೆಲ್ದಿಯಾದ ಜ್ಯೂಸ್ ಸಿಗುತ್ತದೆ. ಇದು ದೇಹಕ್ಕೆ ಹೈಡ್ರೇಷನ್ ನೀಡುವುದರ ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ.
