ಉದಯವಾಹಿನಿ, ಭಾರತ ತಂಡದ ತಾರಾ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಬೌಲಿಂಗ್ ಮಾಡಲು ಹೇಳಿಕೊಟ್ಟಿರುವುದು ನಾನು ಎಂದು ಪಾಕಿಸ್ತಾನ ಮೂಲದ ಯುಎಇ ಬೌಲರ್ ಜಹೂರ್ ಖಾನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಜಹೂರ್ ಖಾನ್ ಎಂಬುವವರು, 2019 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಬೂಮ್ರಾ ಅವರ ಬೌಲಿಂಗ್ ಶೈಲಿಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿದ್ದಾಗ, ತಾವು ನಿಧಾನಗತಿಯ ಎಸೆತಗಳನ್ನು ಹೇಗೆ ಬೌಲ್ ಮಾಡಬೇಕೆಂದು ಹೇಳಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.
2019ರ ಯುಎಇ ಲೆಗ್‌ನಲ್ಲಿ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನೆಟ್ ಬೌಲರ್ ಆಗಿದ್ದಾಗ ಜಹೂರ್ ಬುಮ್ರಾ ಅವರ ಜೊತೆ ಬೌಲಿಂಗ್ ತಂತ್ರದ ಬಗ್ಗೆ ಚರ್ಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಬುಮ್ರಾ ಅವರಿಗೆ ನಿಧಾನಗತಿಯ ಎಸೆತಗಳನ್ನು ಹೇಗೆ ಬಳಕೆ ಮಾಡಬೇಕೆಂದು ತಿಳಿಸಿಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಜಹೂರ್ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ. ಅವರು ಉಪ್ಪೇಕ್ಷೆಗಾಗಿಯೂ ಈ ಹೇಳಿಕೆ ನೀಡಿರುವ ಸಾಧ್ಯತೆ ಇದೆ.
‘ನಾನು ನಿಮಗೆ ಒಂದು ಕಥೆ ಹೇಳುತ್ತೇನೆ. ಅದು 2019ರ ಕೊರೊನಾ ಸಂದರ್ಭ. ಯುಎಇನಲ್ಲಿ ಐಪಿಎಲ್ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಬೂಮ್ರಾ ಅವರು ಸಾಮಾನ್ಯ ಆ್ಯಕ್ಷನ್‌ನೊಂದಿಗೆ ನಿಧಾನಗತಿಯ ಬಾಲ್‌ಗಳನ್ನು ಹಾಕುತ್ತಿದ್ದರು. ನೆಟ್ಸ್‌ನಲ್ಲಿ ಬ್ಯಾಟರ್‌ಗಳು ಅವರ ಬಾಲ್‌ಗಳನ್ನು ಸರಾಗವಾಗಿ ಎದುರಿಸುತ್ತಿದ್ದರು’ ಎಂದಿದ್ದಾರೆ.
