ಉದಯವಾಹಿನಿ ಪಾವಗಡ: ಬಹುಕೋಟಿ ಕೌಶಲ್ಯಾಭಿವೃದ್ಧಿ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಜೈಲಿಗೆ ಕಳುಹಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ರಾಜಕೀಯ ಪಿತೂರಿ ನಡೆಸಿದ್ದಾರೆ ಎಂದು ಕಲ್ಯಾಣದುರ್ಗ ಶಾಸನ ಸಭೆ ಟಿಡಿಪಿ ಉಸ್ತುವಾರಿ ಉಮಾ ಮಹೇಶ್ವರ ನಾಯ್ಡು ಆರೋಪಿಸಿರು.ತೆಲುಗು ದೇಶಂ ಪಕ್ಷ(ಟಿಡಿಪಿ) ವರಿಷ್ಠ ಹಾಗೂ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನವನ್ನು ವಿರೋಧಿಸಿ ಇಲ್ಲಿನ ಅವರ ಅಭಿಮಾನಿಗಳ ಬಳಗದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚಂದ್ರಬಾಬು ಅವರು ಪ್ರಪಂಚಕ್ಕೇ ತಿಳಿದ ವ್ಯಕ್ತಿ. ಅಂಥವರ ಮೇಲೆ ಹಗರಣ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದು ಜಗನ್ ಸರ್ಕಾರದ ದೊಡ್ಡ ತಪ್ಪು. ರಾಷ್ಟ್ರ ರಾಜಕಾರಣದಲ್ಲಿ ಅಪರೂಪದ ಮನ್ನಣೆ ಪಡೆದ ವ್ಯಕ್ತಿ ಅವರು. ಚಂದ್ರಬಾಬು ಅವರು ಯಾವಾಗಲೂ ಉದ್ಯೋಗ, ಕೈಗಾರಿಕೆ ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಾರೆ ಎಂದರು.ಹಿರಿಯ ಮುಖಂಡ ಮಾನಂ ವೆಂಕಟಸ್ವಾಮಿ ಮಾತನಾಡಿ, ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ್ದು ಸರಿಯಲ್ಲ. ಇದು ರಾಜಕೀಯ ದ್ವೇಷದಿಂದ ಕೂಡಿದೆ. ಇದು ರಾಜಕೀಯ ಪಕ್ಷಪಾತವಾಗಿದೆ. ಬೇಕಂತಲೇ ಬಂಧನ ಮಾಡಿ ಕಿರುಕುಳ ನೀಡುವುದು ಉತ್ತಮ ರಾಜಕೀಯವಲ್ಲ. ಅಧಿಕಾರ ನಿಮ್ಮ ಕೈಯಲ್ಲಿದೆ ಎಂದು ಪಕ್ಷಪಾತದಿಂದ ವರ್ತಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಅದು ತಿರುಗುಬಾಣವಾಗಲಿದೆ ಎಂದರು.ಡಾ.ಜಿ.ವೆಂಕಟರಾಮಯ್ಯ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ನಾಯ್ಡು ಅವರನ್ನು ಜೈಲಿಗೆ ಕಳುಹಿಸಲು ವೈ.ಎಸ್.ಜಗನ್ ಮೋಹನ್ ರೆಡ್ಡಿ ರಾಜಕೀಯ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಹಿಂದೂಪುರ ಲೋಕಸಭಾ ಟಿಡಿಪಿ ಮಹಿಳಾ ಅಧ್ಯಕ್ಷೆ ಸುಬ್ಬರತ್ನಮ್ಮ ಮಾತನಾಡಿ, ಚಂದ್ರಬಾಬು ನಾಯ್ಡು ಅವರನ್ನು ನಿರಂಕುಶವಾಗಿ ಮತ್ತು ಅಕ್ರಮವಾಗಿ ಬಂಧಿಸಲು ಕೌಶಲ್ಯಾಭಿವೃದ್ಧಿ ಹಗರಣದ ಹೆಸರಿನಲ್ಲಿ ಕಟ್ಟುಕಥೆ ಪ್ರಕರಣವನ್ನು ಸೃಷ್ಟಿಸಲಾಗಿದೆ. ಪ್ರತಿಪಕ್ಷ ನಾಯಕರ ಧ್ವನಿಯನ್ನು ಎಲ್ಲ ರೀತಿಯಲ್ಲೂ ಹತ್ತಿಕ್ಕುವ ಮೂಲಕ ರಾಜ್ಯದಲ್ಲಿ ಜಗನ್ ಮೋಹನ್ ರೆಡ್ಡಿ ಸರ್ಕಾರ ವಿಧ್ವಂಸಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.ಮಾಜಿ ಸಿಎಂ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.ಈ ಸಂದರ್ಭದಲ್ಲಿ ಹಿರಿಯ ಮುಖಂಡ ಕೆಂಚಗಾನಹಳ್ಳಿ ಗೋವಿಂದಪ್ಪ, ಪರಿಟಾಲ ವೆಂಕಟೇಶ್, ದೇವರಾಜು, ಮಾನಂ ಶಶಿಕಿರಣ್, ಗೊರ್ತಿ ನಾಗರಾಜು, ಸುರೇಂದ್ರ, ಗಂಗಾಧರ್ ನಾಯ್ಡು, ತರಕಾರಿ ಕೃಷ್ಣ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!