ಉದಯವಾಹಿನಿ ದೇವದುರ್ಗ:ತಾಲೂಕಿನ ಮಸ್ಕಿ ಪಟ್ಟಣದಲ್ಲಿ ಪ.ಪಂಗಡಕ್ಕೆ ಸೇರಿದ ನಿರುಪಾದಿ ಎಂಬ ರೈತನ ಮೇಲೆ ಗುಂಡಾಗಿರಿ ನಡೆಸಿರುವ ಮಸ್ಕಿ ಪಿಎಸ್‍ಐ ಮಣಿಕಂಠರವರ ನಡೆಖಂಡನೀಯವಾಗಿದ್ದು,ಕೂಡಲೇ ಬಂಧಿಸಿ ಕಾನೂನು ಶಿಕ್ಷೆಗೆ ಒಳಪಡಿಸಬೇಕೆಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಸಮಿತಿ ಒತ್ತಾಯಿಸಿದೆ.
ಪಟ್ಟಣದ ಸಾರ್ವಜನಿಕ ಕ್ಲಬ್ ನಿಂದ ಸಂಘಟನೆಯ ನೇತೃತ್ವದಲ್ಲಿ ರ್ಯಾಲಿ ನಡೆಸಿ ತಹಸೀಲ್ ಕಚೇರಿಯಲ್ಲಿ ಗ್ರೇಡ್-2 ತಹಸೀಲ್ದಾರ ವೆಂಕಟೇಶ ಅವರ ಮೂಲಕ ಗೃಹಮಂತ್ರಿಯವರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.ಮರಂ ತೆಗೆದುಕೊಂಡು ಹೋಗುತ್ತಿದ್ದ ಅಮಾಯಕ ರೈತ ನಿರುಪಾದಿಯ ಮೇಲೆ ಅವಾಚ್ಯ ಶಬ್ದಗಳಿಂದ ಬೈಯ್ದುದ್ದಲ್ಲದೇ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.ಪರಿಣಾಮ ರಕ್ತ ಹೆಪ್ಪುಗಟ್ಟಿದೆ ರೈತ ನಿರುಪಾದಿಗೆ ಗಾಯಗಳಾಗಿದ್ದು 5 ದಿನ ಕಳೆದರೂ ನಿರುಪಾದಿ ತುರ್ತು ಚಿಕಿತ್ಸಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಗಂಭೀರವಾಗಿ ಜರುಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೌನವಹಿಸಿದ್ದು ಸ್ವಜಾತಿ ಪ್ರೇಮ ಕ್ರಮಕ್ಕೆ ಅಡ್ಡಿಯಾಯಿತೇ? ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೂಡಲೇ ನಿರುಪಾದಿ ಮೇಲೆ ಮಾರಣಾಂತಿಕ ಹಲ್ಲೆ,ಜಾತಿ ನಿಂದನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳ ಮೇಲೆ ಪ್ರಕರಣ ದಾಖಲಿಸಿ,ಕೂಡಲೇ ಬಂಧಿಸಬೇಕು.ಇಲ್ಲದಿದ್ದಲ್ಲಿ ಮುಂದೆ ಜರುಗುವ ಅಹಿತಕರ ಘಟನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಮಿನಿ ವಿಧಾನಸೌಧದಲ್ಲಿ ಜರುಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮುಖಂಡರಾದ ರಾಮಣ್ಣ ನಾಯಕ,ಮಸ್ತಾನಿ ನಾಯಕ,ದಸಂಸ ಮುಖಂಡರಾದ ಹನುಮಂತಪ್ಪ ಕಾಕರಗಲ್,ಶಿವಪ್ಪ ಪಲಕನಮರಡಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮಾನಿಶಯ್ಯ ನಾಯಕ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯಕ ಗೋಸುಲ್, ಸಂಘಟನೆಯ ಪದಾಧಿಕಾರಿಗಳಾದ ಕೆಂಚಣ್ಣ ಪೂಜಾರಿ,ತಿರುಪತಿನಾಯಕ ಗಲಗ,ವೆಂಕಟೇಶ ಸೋಮಕಾರ,ಕೆ.ವಿನೋದಕುಮಾರ ಹಿರೇಬೂದೂರು,ಬುಡ್ಡಯ್ಯ ನಾಯಕ,ನಿಜಲಿಂಗಪ್ಪ ಕೋಣಚಪ್ಪಳಿ,ರಮೇಶನಾಯಕ,ಶಂಕರಗೌಡ ಪಾಟೀಲ್,  ಯಮನೂರಪ್ಪ ನಾಯಕ, ಹನುಮೇಶ ನಾಯಕ ವಕೀಲ ಹಾಗೂ ವೆಂಕಟೇಶ್ ನಾಯಕ ಆಲ್ಕೋಡ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!