ಉದಯವಾಹಿನಿ, ಮಂಗಳೂರು: ‘ಅಲೆ ಬುಡ್ಯೆರ್ ಎಂಬ ಘೋಷಣೆಯೊಂದಿಗೆ ಕರೆಯಲ್ಲಿ ಜೋಡಿ ಕೋಣಗಳ ವೀರೋಚಿತ ಓಟ, ಜತೆಗೆ ಹಗ್ಗ- ನೇಗಿಲು ಹಿಡಿದು ಓಡುವ ಓಟಗಾರ, ಕೋಣ ಗೆದ್ದ ಖುಷಿಯಲ್ಲಿ ಮೀಸೆ ತಿರುವುತ್ತಾ ಗತ್ತಿನ ಹೆಜ್ಜೆ ಹಾಕುವ ಯಜಮಾನರು, ಸ್ಟಾರ್ ಕೋಣಗಳ ಹಿಂದೆ ಅಭಿಮಾನಿಗಳ ದಂಡು, ಪ್ರೇಕ್ಷಕರ ಕರಾಡತನ…’ ಇದುವರೆಗೆ ಕರಾವಳಿಗೆ ಸೀಮಿತವಾಗಿದ್ದ ಕಂಬಳ ಕೂಟದ ಈ ದೃಶ್ಯಗಳು ಇದೀಗ ರಾಜಧಾನಿ ಬೆಂಗಳೂರಿಗೂ ಪರಿಚಯವಾಗುತ್ತಿದೆ.
ಬೆಂಗಳೂರು ಕಂಬಳ ಆಯೋಜನೆಯ ಬಗ್ಗೆ ಮಂಗಳೂರಿನಲ್ಲಿ ಶನಿವಾರ ಕೋಣಗಳ ಯಜಮಾನರು ಮತ್ತು ಸಮಿತಿ ಪದಾಧಿಕಾರಿಗಳ ಸಭೆ ನಡೆಯಿತು. ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹಲವು ಮಾಹಿತಿ ಹಂಚಿಕೊಂಡರು.
ಬೆಂಗಳೂರು ಕಂಬಳಕ್ಕೆ ಸುಮಾರು 100ರಿಂದ 130ರಷ್ಟು ಜೊತೆ ಕೋಣಗಳು ಭಾಗವಹಿಸಲಿದ್ದು, ಕಂಬಳಕ್ಕೆ ಎರಡು ದಿನಗಳ ಮೊದಲೇ ಕೋಣಗಳು ಬೆಂಗಳೂರಿಗೆ ಬರಲಿದೆ.
