
ಉದಯವಾಹಿನಿ, ನಾಗಮಂಗಲ: ವಿಶ್ವವನ್ನೇ ತನ್ನತ್ತ ಸೆಳೆಯುತ್ತಿರುವ ಪರಮ ಶ್ರೇಷ್ಠ ಸಂಸ್ಕೃತಿ-ಸಂಸ್ಕಾರಗಳನ್ನು ಪಾಲಿಸುತ್ತಿರುವ ಸನಾತನ ರಾಷ್ಟ್ರದಲ್ಲಿ ಜನಿಸಿದ ಮಹಾತ್ಮ ಗಾಂಧೀಜಿ, ತನ್ನ ಜೀವನವೇ ಒಂದು ಸಂದೇಶವೆಂದು ಆದರ್ಶಪ್ರಾಯವಾಗಿ ಬದುಕಿದ ಭಾರತಾಂಬೆಯ ವರಪುತ್ರ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಆಡಳಿತಾಧಿಕಾರಿ ಡಾ. ಎ ಟಿ ಶಿವರಾಮು ಅಭಿಪ್ರಾಯಪಟ್ಟರು.ಅವರಿಂದು ನಾಗಮಂಗಲ ತಾಲೂಕಿನ ಬಿ.ಜಿ ನಗರದ ಪಾಂಚಜನ್ಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸತ್ಯ ಅಹಿಂಸೆ ಮತ್ತು ಭ್ರಾತೃತ್ವದ ಮೂಲಕ ವಿಶ್ವಶಾಂತಿಯ ಸಂದೇಶಾದರ್ಶಗಳನ್ನು ಜಗತ್ತಿಗೆ ಸಾರಿದ ಗಾಂಧೀಜಿ ರಾಮರಾಜ್ಯದ ಕನಸನ್ನು ಕಂಡಿದ್ದರು. ಭಾರತೀಯರಾದ ನಾವೆಲ್ಲಾ ಪ್ರೀತಿ ಸೌಹಾರ್ದತೆ ಮತ್ತು ಭ್ರಾತೃತ್ವದಿಂದ ಪರಸ್ಪರ ಗೌರವಿಸುವ ಮೂಲಕ ರಾಮ ರಾಜ್ಯವನ್ನು ಸಾಕಾರಗೊಳಿಸಬೇಕಿದೆ. ಮಾನವತ್ವದ ಸೇವೆಯೇ ದೈವತ್ವದ ಸೇವೆ ಎಂದು ಬೋಧಿಸಿದ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ ದಿವ್ಯ ಆಶೀರ್ವಾದದಲ್ಲಿ ಬೆಳೆಯುತ್ತಿರುವ ನೀವು ಕಲೆ ಕ್ರೀಡೆ ಯೋಗ ಇತ್ಯಾದಿ ಕೌಶಲ್ಯಗಳನ್ನು ಸ್ವಯಂ ಶಿಸ್ತಿನೊಂದಿಗೆ ರೂಢಿಸಿಕೊಂಡು ಭಾರತದ ಭವ್ಯ ಪ್ರಜೆಗಳಾಗಿ ಎಂದರು.
ಗಾಂಧೀಜಿಯವರ 154ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ 119ನೇ ಜಯಂತಿ ಸಂದರ್ಭದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಪಾಂಚಜನ್ಯ ಮತ್ತು ಆದಿಚುಂಚನಗಿರಿ ವಿಶ್ವವಿದ್ಯಾಲಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಸಾರ್ಥಕಗೊಂಡಿದೆ, ಈ ಸಂದರ್ಭದಲ್ಲಿ ಗಾಂಧೀಜಿಯವರ ಆಶಯದಂತೆ ವೃತ್ತಿ ಕೌಶಲ್ಯವನ್ನು ಗೌರವಿಸಿ ಪಾಂಚಜನ್ಯದ ಮಂಜುಳಮ್ಮ, ಅನಸೂಯಮ್ಮ, ಸೌಭಾಗ್ಯಮ್ಮ, ಪುಷ್ಪಲತಾ ಮತ್ತು ದೇವರಾಜು ಎಂಬ ಐದು ಮಂದಿ ಆಯಾ ಮತ್ತು ಸಹಾಯಕರನ್ನು ಸನ್ಮಾನಿಸಲಾಯಿತು. ಸಂಗೀತ ಶಿಕ್ಷಕ ಚಂದ್ರಪ್ಪ ಮಾರ್ಗದರ್ಶನದಲ್ಲಿ ಬಿ ಇಡಿ ಪ್ರಶಿಕ್ಷಣಾರ್ಥಿಗಳು ಭಜನೆ ಗಾಯನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಬಿಜಿಎಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಟಿ ಎನ್ ಶಿಲ್ಪ, ಮಾಡಲ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲ ವಿ ಪುಟ್ಟಸ್ವಾಮಿ, ಉಪ ಪ್ರಾಂಶುಪಾಲೆ ಸಿ ದರ್ಶಿನಿ, ಕಾರ್ಯಕ್ರಮ ಸಂಯೋಜಕರಾದ ಟಿ ಎಸ್ ಗಾಯತ್ರಿ, ಸಿ ಎಲ್ ಶಿವಣ್ಣ ಸೇರಿದಂತೆ ಪಾಂಚಜನ್ಯದ ಅಧ್ಯಾಪಕರು ಮತ್ತು ಸಿಬ್ಬಂದಿ ಹಾಜರಿದ್ದರು.
