ಉದಯವಾಹಿನಿ ದೇವರಹಿಪ್ಪರಗಿ: ಉತ್ತಮ ವಿಟಮಿನ್‌ ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಿದೆ. ತಾಯಿ-ಮಗುವಿನ ಅಪೌಷ್ಟಿಕತೆ ನಿವಾರಣೆಗಾಗಿ ರಾಷ್ಟ್ರೀಯ ಪೋಷಣಾ ಅಭಿಯಾನ ನಡೆಯುತ್ತಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ತಾಲೂಕು ಆರೋಗ್ಯ ಶಿಕ್ಷಣಾರ್ಥಿಗಳಾದ ಎಸ್ ಡಿ ಕುಲಕರ್ಣಿ ಹೇಳಿದರು. ಪಟ್ಟಣದ ವಾರ್ಡ ನಂ-15ರ ಅಂಗನವಾಡಿ ಕೇಂದ್ರದ ಆವರಣದಲ್ಲಿ ಆರೋಗ್ಯ ಮತ್ತು ಶಿಶು ಅಭಿವೃದ್ದಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣಾ ಅಭಿಯಾನ ಹಾಗೂ ತಾಯಿಯಂದಿರ ಸಭೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗರ್ಭಿಣಿಯರು ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜೊತೆ ಮೊಳಕೆ ಕಾಳು ಉಪಯೋಗಿಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು. ತಾಯಿ ಆರೋಗ್ಯವಾಗಿದ್ದಾಗ ಮಾತ್ರ ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ ಪಂ ಸದಸ್ಯರುಗಳಾದ ಬಸೀರ ಅಹ್ಮದ್ ಬೇಪಾರಿ ಹಾಗೂ ರಮೇಶ ಮಸಿಬಿನಾಳ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೈಕೆಗೆ ಸಂಬಂಧಿಸಿ ಮಾಹಿತಿ ಕೊರತೆ ಹೆಚ್ಚಿದೆ. ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಮಾಹಿತಿಯನ್ನು ತಲುಪಿಸುವ ಕಾರ್ಯ ಅಗತ್ಯ. ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು. ಅದನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನ ಮಹತ್ವದ್ದಾಗಿದೆ.ಎಲ್ಲ ಗರ್ಭಿಣಿಯರು ಹಾಗೂ ಮಕ್ಕಳು ಲಸಿಕೆ ಪಡೆದುಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರಾಮನಗೌಡ ನೀರಲಗಿ ಸ್ವಾಗತಿಸಿ ವಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಸುಕನ್ಯಾ ಚಳಗೇರಿ, ದಾನಮ್ಮ ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರಾದ ರೇಷ್ಮಾ ಗುತ್ತೇದಾರ, ಮುಖಂಡ ಹುಸೇನ ಗೌಂಡಿ ಸೇರಿದಂತೆ ಶಿಕ್ಷಕರು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಎಲ್ಲ ಗರ್ಭಿಣಿ ತಾಯಂದಿರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!