ಉದಯವಾಹಿನಿ, ಮುಂಬೈ: ಬೆಟ್ಟಿಂಗ್ ಆಯಪ್‌ಗೆ ಸಂಬಂಧಿಸಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್‌ಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ.ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ ದೇಶದ ಹಲವು ನಗರಗಳಲ್ಲಿ ಶೋಧ ಕಾರ್ಯ ನಡೆಸಿತ್ತು.ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಮಹಾದೇವ ಬೆಟ್ಟಿಂಗ್ ಆಯಪ್ ಮೂಲಕ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಕೋಲ್ಕತ್ತಾ, ಭೋಪಾಲ್, ಮುಂಬೈ ನಗರಗಳಲ್ಲಿ ಶೋಧ ನಡೆದಿತ್ತು. ದೊಡ್ಡ ಮಟ್ಟದ ಹವಾಲಾ ನಡೆದಿರುವ ಸಾಧ್ಯತೆಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರಭ್ ಚಂದ್ರಕರ್ ಹಾಗೂ ರವಿ ಉಪ್ಪಾಲ ಅವರಿಂದ ₹417 ಕೋಟಿ ಮೊತ್ತದ ವರ್ಗಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಹಿಂದೆ ವಶಕ್ಕೆ ಪಡೆದಿದ್ದರು. ದುಬೈನಲ್ಲಿ ನಡೆದ ಸೌರಭ್ ಚಂದ್ರಕರ್ ವಿವಾಹ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ಭಾಗಿಯಾಗಿದ್ದರು. ಸೌರಭ್ ಹಾಗೂ ರಣಬೀರ್ ನಡುವಿನ ಸಂಬಂಧ ಕುರಿತು ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ. ಇದಕ್ಕಾಗಿ ಅ. 6 ದಿನಾಂಕ ನಿಗದಿಪಡಿಸಿದೆ ಎಂದು ವರದಿಯಾಗಿದೆ.
ಇದೇ ವಿವಾಹ ಕಾರ್ಯಕ್ರಮದಲ್ಲಿ ರಣಬೀರ್ ಜತೆ ಟೈಗರ್ ಶ್ರಾಫ್, ಸನ್ನಿ ಲಿಯೋನ್, ನೇಹಾ ಕಕ್ಕರ್, ಆತೀಫ್ ಅಸ್ಲಮ್ ಮತ್ತು ರಾಹತ್ ಫತೇ ಅಲಿ ಖಾನ್ ಕೂಡಾ ಭಾಗಿಯಾಗಿದ್ದರು. ಇವರ ಮೇಲೂ ಇಡಿ ಕಣ್ಣಿಟ್ಟಿದೆ ಎಂದೆನ್ನಲಾಗಿದೆ.
