ಉದಯವಾಹಿನಿ, ನವದೆಹಲಿ: ಚಂದ್ರಯಾನ -೩ ಲ್ಯಾಂಡರ್ ’ವಿಕ್ರಮ್’ ಮತ್ತು ರೋವರ್ ’ಪ್ರಜ್ಞಾನ್’ ಮರು ಸಕ್ರಿಯಗೊಳ್ಳುವ ಯಾವುದೇ ಭರವಸೆ ಇಲ್ಲ ಎಂದು ಹೆಸರಾಂತ ಬಾಹ್ಯಾಕಾಶ ವಿಜ್ಞಾನಿ ಹಾಗೂ ಮಾಜಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದ್ದಾರೆ.
ಮಿಷನ್‌ನೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದ ಕಿರಣ್ ಕುಮಾರ್, ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಜ್ಞಾನ್ ಸಂಪೂರ್ಣವಾಗಿ ನಿದ್ರೆಗೆ ಜಾರಿದ್ದು, ಮತ್ತೆ ಎಚ್ಚರಗೊಳಿಸುವ ಯಾವುದೇ ಭರವಸೆ ಇಲ್ಲ, ಇವು ಸಕ್ರಿಯಗೊಳ್ಳುವುದಾದರೆ ಈಗಾಗಲೇ ಆಗಬೇಕಿತ್ತು ಎಂದಿದ್ದಾರೆ.
ಈ ಯೋಜನೆಯನ್ನು ಒಂದು ಚಂದ್ರನ ದಿನ ಅಂದರೆ ೧೪ ಭೂಮಿಯ ದಿನಗಳು ಎಂದು ಅಂದಾಜಿಸಿ ಕಾರ್ಯಾಚರಣೆಗಾಗಿ ವಿಕ್ರಮ್ ಮತ್ತು ಪ್ರಾಗ್ಯಾನ್ ರೋವರ್ ವಿನ್ಯಾಸಗೊಳಿಸಲಾಗಿತ್ತು. ಆದರೆ, ಇವು ಎರಡನೇ ಇನ್ನಿಂಗ್ಸ್ ಆರಂಭಿಸಬಹುದು ಎಂಬ ವಿಶ್ವಾಸ ಅನೇಕರಲ್ಲಿತ್ತು.
ಚಂದಿರನ ಒಂದು ದಿನದ ನಂತರ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕು ಬೀಳದೇ ಸಂಪೂರ್ಣವಾಗಿ ಕತ್ತಲು ಆವರಿಸುತ್ತದೆ. ಈ ವೇಳೆ ಯಾವುದೇ ಅಧ್ಯಯನ ಮಾಡಲು ಸಾಧ್ಯವಿಲ್ಲ. ಹಾಗಾಗಿ, ೧೪ ದಿನಗಳ ಅಧ್ಯಯನಕ್ಕೆ ಲ್ಯಾಂಡರ್ ಮತ್ತು ರೋವರ್ ಅನ್ನು ಇಸ್ರೋ ಅಭಿವೃದ್ಧಿಪಡಿಸಿತ್ತು. ಇನ್ನು ಮುಂದೆ ಮತ್ತೆ ಚಂದ್ರಯಾನ ೩ ಪುನರುಜ್ಜೀವನಗೊಳ್ಳುವ ಭರವಸೆ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!