ಉದಯವಾಹಿನಿ, ಕಠ್ಮಂಡು : ಇಸ್ರೇಲ್‌ನ ದಕ್ಷಿಣ ಭಾಗದ ಕುಬುಝ್ ಅಲುಮಿಮ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ನೇಪಾಳದ 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಕಾಶ್ ಸೌದ್ ತಿಳಿಸಿದ್ದಾರೆ.11 ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುತ್ತಿಲ್ಲ.ಅವರು ಮೃತಪಟ್ಟಿರುವ ಶಂಕೆ ಇದೆ. ಕುಬುಝ್ ಅಲುಮಿಮ್‌ನಲ್ಲಿ ನೇಪಾಳದ 17 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲಿ ಇಬ್ಬರು ಸುರಕ್ಷಿತವಾಗಿ ಪಾರಾಗಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಶ್ರಮ ವಹಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬ್ರಿಟನ್‌ನ ವ್ಯಕ್ತಿಯೊಬ್ಬರನ್ನು ಹಮಾಸ್ ಬಂಡುಕೋರರು ಗಾಜಾದಲ್ಲಿ ಒತ್ತೆಯಿರಿಸಿಕೊಂಡಿದ್ದಾರೆ ಎಂದು ಬ್ರಿಟನ್‌ನ ಇಸ್ರೇಲ್ ರಾಯಭಾರಿ ತಿಳಿಸಿದ್ದಾರೆ. ಅವರನ್ನು ಬಿಡಿಸಲು ಇಸ್ರೇಲ್ ಸರ್ಕಾರ ಪ್ರಯತ್ನಿಸುತ್ತಿದೆ ಎಂದೂ ಹೇಳಿದ್ದಾರೆ.ಕಾಣೆಯಾಗಿರುವ ಬ್ರಿಟನ್ ವ್ಯಕ್ತಿ ಜೇಕ್ ಮಾರ್ಲೊ (26) ತಾಯಿ ಈ ಕುರಿತು ಮಾಹಿತಿ ನೀಡಿದ್ದಾರೆ. ‘ಶನಿವಾರ 4.30ಕ್ಕೆ ಆತನೊಂದಿಗೆ ಮಾತನಾಡಿ ರಾಕೆಟ್‌ಗಳು ಹಾರಾಡುತ್ತಿರುವ ಕುರಿತು ತಿಳಿಸಿದ್ದೆ. 5.30ಕ್ಕೆ ಆತ ಮೊಬೈಲ್ ಸಂದೇಶ ಕಳುಹಿಸಿ, ತಾನು ಕ್ಷೇಮದಿಂದ ಇರುವ ಮಾಹಿತಿ ನೀಡಿದ್ದ. ಆ ನಂತರ ಆತನ ಪತ್ತೆಯಿಲ್ಲ. ಆತ ಬದುಕಿದ್ದಾನೋ ಅಥವಾ ಆಸ್ಪತ್ರೆಯಲ್ಲಿ ಇದ್ದಾನೊ ಒಂದೂ ತಿಳಿಯದಾಗಿದೆ’ ಜೇಕ್ ತಾಯಿ ದುಃಖ ತೋಡಿಕೊಂಡಿದ್ದಾರೆ.
