
ಉದಯವಾಹಿನಿ ದೇವರಹಿಪ್ಪರಗಿ: ತಾಲೂಕಿನಲ್ಲಿ ಬರಗಾಲ ಆವರಿಸಿರುವುದರಿಂದ ಜನತೆ ಸಂಕಷ್ಟದಲ್ಲಿ ಜೀವನ ಕಳೆಯುತ್ತಿದ್ದಾರೆ. ತಕ್ಷಣ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ದುಡಿಯುವ ಕೈಗಳಿಗೆ ಸತತ ಕೆಲಸ ನೀಡಬೇಕು ಹಾಗೂ ರೈತರ ಸಾಲಮನ್ನಾ ಮಾಡುವುದು, ಪ್ರತಿ ಎಕರೆಗೆ 25 ಸಾವಿರ ರೂ.ಬೆಳೆ ನಷ್ಟ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುರುವಾರ ತಹಸೀಲ್ದಾರರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಈರಪ್ಪ ಕುಳೇಕುಮಟಗಿ ಮಾತನಾಡಿ, ತಾಲೂಕಿನ ರೈತರ ಬಾಕಿ ಇರುವ ವಿಮೆ ಹಣ ನೀಡಬೇಕು, ಬರಗಾಲ ಸಮಯದಲ್ಲಿ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು, ಕಳೆದ ವರ್ಷ ತೊಗರಿ ಬೆಳೆಗೆ ನೆಟಿರೋಗದ ಪರಿಹಾರ ಹಣ ಹಲವು ರೈತರಿಗೆ ಇನ್ನೂ ಬಂದಿಲ್ಲ ಎಂದು ಹೇಳಿದರು. ನಂತರ ಸಂಘದ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ, ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಮಳೆಯ ಅಭಾವದಿಂದ ಬೆಳೆ ನಷ್ಟ ಅನುಭವಿಸಿ ತೀವ್ರ ತೊಂದರೆಯಲ್ಲಿರುವ ರೈತರಿಗೆ ಎಕರೆಗೆ ರೂ.25 ಸಾವಿರ ಬೆಳೆಹಾನಿ ಪರಿಹಾರ ನೀಡಬೇಕು. ಅಲ್ಲದೇ ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಗುಳೆ ಹೋಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಸಂಪತ್ ಜಮಾದಾರ, ಮಲ್ಲನಗೌಡ ಬಿರಾದಾರ, ಗುರಣ್ಣ ಹಂಗರಗಿ, ಮಲ್ಲಪ್ಪ ಸುಂಬಡ,ಸಂಗಪ್ಪಗೌಡ ಬಿರಾದಾರ, ಚಂದ್ರಕಾಂತ ಪ್ಯಾಟಿ, ಹಣಮಂತ್ರಾಯಗೌಡ ಪಾಟೀಲ, ಲಕ್ಕಪ್ಪ ಹೂಗಾರ, ಚಿದಾನಂದ ಹಡಪದ, ಸಂಗಮೇಶ ಹುಣಸಿಗಿ ಸೇರಿದಂತೆ ಹಲವಾರು ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.
