
ಉದಯವಾಹಿನಿ ದೇವನಹಳ್ಳಿ: 20 ವರ್ಷದ ಮಗಳು ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೆತ್ತ ತಂದೆಯೇ ಮಮಕಾರವೂ ಇಲ್ಲದೇ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ದುಷ್ಕೃತ್ಯ ತಾಲ್ಲೂಕಿನ ಬಿದಲೂರು ಗ್ರಾಮದಲ್ಲಿ ಗುರುವಾರ ಮುಂಜಾನೆ ನಡೆದಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕವನಾ (20) ಎಂಬ ಯುವತಿಯನ್ನು ಚಿಕನ್ ಅಂಗಡಿ ನಡೆಸುತ್ತಿದ್ದ ಆಕೆಯ ತಂದೆ ಮಂಜುನಾಥ್ (45) ಎಂಬಾತ ಕೋಳಿಯ ತಲೆ ಕಡಿಯುವ ರೀತಿಯ ಸ್ವಂತ ಮಗಳನ್ನೇ ಮರ್ಯಾದೆ ಗೇಡಿನ ಹತ್ಯೆ ಮಾಡಿದ್ದಾನೆ.ಅನ್ಯ ಜಾತಿಯ ಯುವಕನನ್ನು ಪ್ರೀತಿಸುವ ವಿಚಾರವಾಗಿ ಎಚ್ಚರಿಕೆ ನೀಡಿದ್ದ ತಂದೆ ಮಂಜುನಾಥ್, ಇಂತಹ ಸಂಬಂಧವನ್ನು ಮುಂದುವರೆಸದಂತೆ ಬುದ್ಧಿವಾದ ಹೇಳಿದ್ದಾರೆ. ಮನೆಯಲ್ಲಿಯೂ ಈ ವಿಚಾರವಾಗಿ ಮನಸ್ತಾಪ ಹೆಚ್ಚಾಗಿದ್ದರಿಂದ ಹುಡುಗನೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ಈ ಹಿಂದೆ ಮಗಳು ತಿಳಿಸಿದ್ದಾಳೆ. ಆದರೆ, ಮಗಳ ಚಲನವಲನದ ಮೇಲೆ ಕಣ್ಣಿಟ್ಟಿದ ಮಂಜುನಾಥ್ ಈ ವಿಚಾರವಾಗಿ ಬುಧವಾರ ರಾತ್ರಿ ಮನೆಯಲ್ಲಿ ವಿಚಾರ ಪ್ರಸ್ತಾಪ ಮಾಡಿ, ಕದ್ದು ಮುಚ್ಚಿ ಅವನ ಜತೆ ಸಂಬಂಧ ಮುಂದುವರೆಸಿರುವ ಕುರಿತು ಆಧಾರ ಸಹಿತವಾಗಿ ಮಗಳನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮತಿ ತಾರಕಕ್ಕೆ ಏರಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಮೇಲೆ ಕೋಪದಿಂದ ದೈಹಿಕವಾಗಿ ಹಲ್ಲೆ ಮಾಡಿರುವ ಮಂಜುನಾಥ್, ಮನೆಯಲ್ಲಿದ್ದ ಕತ್ತಿಯಿಂದ ಆಕೆಯ ಕತ್ತನ್ನೇ ಕೊಯ್ದು ಹಾಕಿದ್ದು, ಕಾಲಿನ ಭಾಗಗಳಿಗೆ ತೀವ್ರವಾಗಿ ದಾಳಿ ನಡೆಸಿದ್ದಾನೆ. ಈ ಘಟನೆ ಬಿದಲೂರು ಗ್ರಾಮದಲ್ಲಿ ಭಾರಿ ಆತಂಕ ಮೂಡಿಸಿದೆ. ಬೆಳಗ್ಗೆ ಮನೆಯ ಮುಂದೆ ನೂರಾರು ಜನರು ನೆರೆದಿದ್ದಾರೆ. ಅಪ್ಪನ ಕ್ರೌರ್ಯಕ್ಕೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವನಾಥಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಠಾಣೆಗೆ ಬಂದು ಮಗಳ ಕೊಲೆ ವಿಚಾರ ತಿಳಿಸಿದ ಅಪ್ಪ!
ಬಿದಲೂರಿಗೆ ಭೇಟಿ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್, ಮಾತನಾಡಿ, ‘ಗುರುವಾರ ಬೆಳಿಗ್ಗೆ ಆರೋಪಿ ಮಂಜುನಾಥ್ ವಿಶ್ವನಾಥಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಗಳನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಆತನನ್ನು ವಶ್ಕಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಬುಧವಾರ ತಡರಾತ್ರಿ ಹಿಟ್ಟಿನ ಕೋಲಿನಿಂದ ತಲೆಯ ಭಾಗಕ್ಕೆ ಹೊಡೆದಿದ್ದು ಕವನಾ ಪ್ರಜ್ಞೆ ತಪ್ಪಿದ್ದಾಳೆ. ತದನಂತರ ಚೂಪದ ಚಾಕುವಿನಿಂದ ಕತ್ತಿನ ಭಾಗವನ್ನು ಹರಿತವಾಗಿ ಹರಿದಿದ್ದು ಆಕೆಯೂ ದಾರುಣವಾಗಿ ಮೃತಳಾಗಿದ್ದಾಳೆ ಎಂದು ಮಾಹಿತಿ ನೀಡಿದ್ಧಾರೆ.

