ಉದಯವಾಹಿನಿ, ಟೆಲ್ ಅವೀವ್: ಇಸ್ರೇಲ್ ಹಾಗೂ ಇರಾನ್ ನಡುವಿನ ಹಗೆತನದ ಬಗ್ಗೆ ಇಡೀ ಜಾಗತಿಕ ಮಟ್ಟಕ್ಕೆ ಅರಿವಿದೆ. ಬದ್ದ ವೈರಿಗಳಾಗಿರುವ ಇವರ ನಡುವಿನ ಮುಸುಕಿನ ಗುದ್ದಾಟ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ನಡುವೆ ಗಾಜಾ ಪಟ್ಟಿಯ ಮೇಲೆ ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಮುಂದೆ ಪೂರ್ಣ ಪ್ರಮಾಣದ ನೆಲದಿಂದಲೇ ದಾಳಿಗೆ ಸಿದ್ಧ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಇರಾನ್ ಕಠಿಣ ಸವಾಲು ನೀಡಿದ್ದು, ಬಂದೂಕಿನ ಟ್ರಿಗರ್ ಮೇಲೆ ನಮ್ಮ ಬೆರಳಿದೆ ಎಂದು ನೇರ ಎಚ್ಚರಿಕೆ ಸಂದೇಶ ರವಾನಿಸಿದೆ.
ಇಸ್ರೇಲಿಗರ ಆಕ್ರಮಣಗಳು ನಿಲ್ಲದಿದ್ದರೆ, ಈ ಪ್ರದೇಶದ ಎಲ್ಲಾ ದೇಶಗಳ ಕೈಗಳು ಪ್ರಚೋದಕದಲ್ಲಿರಲಿದೆ. ಪರಿಸ್ಥಿತಿಯ ನಿಯಂತ್ರಣ ಮತ್ತು ಸಂಘರ್ಷಗಳ ವಿಸ್ತರಣೆಯನ್ನು ಯಾರೂ ಖಾತರಿಪಡಿಸುವುದಿಲ್ಲ. ಯುದ್ಧ ಮತ್ತು ಬಿಕ್ಕಟ್ಟಿನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ತಡೆಯಲು ಆಸಕ್ತಿ ಹೊಂದಿರುವವರು, ಗಾಜಾದಲ್ಲಿ ನಾಗರಿಕರು ಮತ್ತು ನಾಗರಿಕರ ವಿರುದ್ಧ ಪ್ರಸ್ತುತ ಅನಾಗರಿಕ ದಾಳಿಗಳನ್ನು ತಡೆಯಬೇಕಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಎಚ್ಚರಿಕೆ ನೀಡಿದ್ದಾರೆ.
ಗಾಜಾಗೆ ಮಾನವೀಯ ನೆರವು ಪೂರೈಕೆಗೆ ಅಮೆರಿಕಾ ಬೆಂಬಲ ಗಾಜಾ ಪ್ರದೇಶಕ್ಕೆ ಮಾನವೀಯ ನೆರವು ಪೂರೈಸುವ ಮತ್ತು ನಾಗರಿಕರನ್ನು ರಕ್ಷಿಸುವ ಪ್ರಯತ್ನಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಸ್ರೇಲ್‌ಗೆ ಬೆಂಬಲ ನೀಡುವ ಸಲುವಾಗಿ ಅಮೆರಿಕಾ ತನ್ನ ಎರಡನೇ ಯುದ್ಧನೌಕೆಯನ್ನು ರವಾನಿಸುವುದಾಗಿ ತಿಳಿಸಿದೆ.
