ಉದಯವಾಹಿನಿ, ಟೆಹ್ರಾನ್ : ಇರಾನ್‌ನ ಖ್ಯಾತ ಚಿತ್ರ ನಿರ್ದೇಶಕರಗಳಲ್ಲಿ ಒಬ್ಬರಾಗಿರುವ ದರಿಯುಶ್ ಮೆಹರ್ಜುಯಿ ಹಾಗೂ ಅವರ ಪತ್ನಿಯನ್ನು ಇರಿದು ಹತ್ಯೆ ನಡೆಸಿದ ಘಟನೆ ರಾಜಧಾನಿ ಟೆಹ್ರಾನ್ ಹೊರವಲಯದ ಮನೆಯಲ್ಲಿ ನಡೆದಿದೆ.
ದರಿಯುಶ್ ಮೆಹರ್ಜುಯಿ (೮೩) ಹಾಗೂ ಅವರ ಪತ್ನಿ ವಹಿದೆಹ್ ಮುಹಮ್ಮದಿಫೆರ್ ಅವರ ಮೃತದೇಹ ಮನೆಯಲ್ಲೇ ಇರಿತದ ಗಾಯಕ್ಕೊಳಗಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಮೆಹರ್ಜುಯಿ ಅವರನ್ನು ಇರಾನಿನ ಹೊಸ ಅಲೆಯ ಸಿನಿಮಾದ ಸಂಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ವಿಭಿನ್ನ ಶೈಲಿಯ ಚಿತ್ರಗಳ ಮೂಲಕ ಅವರು ಖ್ಯಾತಿ ಪಡೆದುಕೊಂಡಿದ್ದರು. ಸ್ಥಳೀಯ ಮೂಲಗಳ ಪ್ರಕಾರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಗುರುತಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಮುಖ್ಯ ನ್ಯಾಯಮೂರ್ತಿ ಹುಸೇನ್ ಫಝೆಲಿ ಅವರ ಪ್ರಕಾರ, ಮೆಹರ್ಜುಯಿ ಅವರು ಶನಿವಾರ ರಾತ್ರಿ ಊಟಕ್ಕೆ ಕರಾಜ್ ನಗರದಲ್ಲಿರುವ ತಮ್ಮ ಮನೆಗೆ ಬರಲು ತಮ್ಮ ಮಗಳನ್ನು ಆಹ್ವಾನಿಸಿದ್ದರು. ಅವಳು ಮನೆಗೆ ಬಂದಾಗ ಅವಳ ಹೆತ್ತವರ ಶವಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಚಿತ್ರಕಥೆಗಾರ ಮತ್ತು ವಸ್ತ್ರ ವಿನ್ಯಾಸಕಿ ಕೂಡ ಆಗಿರುವ ಮೊಹಮ್ಮದಿಫರ್ ಅವರು ಇತ್ತೀಚೆಗೆ ತನಗೆ ಬೆದರಿಕೆ ಹಾಕಲಾಗಿದೆ ಮತ್ತು ಮನೆಗೆ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಸದ್ಯ ಪ್ರಕರಣಕ್ಕೆ ಸಂಬಂಧಿಸದಿಂತೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
