ಉದಯವಾಹಿನಿ, ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರೀಂದಮ್ ಬಗ್ಚಿ ಅವರನ್ನು ವಿಶ್ವಸಂಸ್ಥೆ ಹಾಗೂ ಜಿನೀವಾದಲ್ಲಿರುವ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಭಾರತದ ಕಾಯಂ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ.
ಶೀಘ್ರವೇ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹುದ್ದೆ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಹುದ್ದೆಗೆ ಜಂಟಿ ಕಾರ್ಯದರ್ಶಿ (ಜಿ೨೦) ನಾಗರಾಜ ನಾಯ್ಡು ಕಕನೂರು ಮತ್ತು ಮರಿಷ್‌ನಲ್ಲಿ ಭಾರತದ ಹೈಕಮಿಷನರ್ ಆಗಿರುವ ಕೆ.ನಂದಿನಿ ಸಿಂಗ್ಲಾ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದು ಬಂದಿದೆ.
ಬಗ್ಜಿ ಅವರು ಭಾರತದ ವಿದೇಶಾಂಗ ಸೇವೆಗಳ ೧೯೯೫ನೇ ಬ್ಯಾಚ್ ಅಧಿಕಾರಿಯಾಗಿದ್ದು, ೨೦೨೧ರ ಮಾರ್ಚ್ ನಲ್ಲಿ ವಕ್ತಾರರಾಗಿ ಅಧಿಕಾರ ಸ್ವೀಕರಿಸಿದ್ದರು. ಇವರ ಅಧಿಕಾರಾವಧಿಯಲ್ಲಿ ಕೋವಿಡ್-೧೯ ಸಾಂಕ್ರಾಮಿಕ ಮತ್ತು ಚೀನಾ ಜತೆ ಭಾರತದ ಗಡಿಸಂಘರ್ಷದಂಥ ಜಟಿಲ ಸಮಸ್ಯೆಗಳು ತಲೆದೋರಿದ್ದು, ಇವರು ಯಶಸ್ವಿಯಾಗಿ ನಿಭಾಯಿಸಿದ್ದರು.
