ಉದಯವಾಹಿನಿ ದೇವರಹಿಪ್ಪರಗಿ:ಬಾಲ್ಯ ವಿವಾಹವು ಅಭಿವೃದ್ಧಿಗೆ ಮಾರಕವಾಗಿರುವ ಸಮಸ್ಯೆಯಾಗಿದೆ. ಬಾಲ್ಯ ವಿವಾಹವನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ಬಾಲ್ಯ ವಿವಾಹ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ ಹೇಳಿದರು. ತಾಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸಮೀತಿ ಸಿಂದಗಿ ,ವಕೀಲರ ಸಂಘ ಸಿಂದಗಿ ಹಾಗೂ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ಸಹಯೋಗದಲ್ಲಿ  ಆಯೋಜಿಸಿದ್ದ ಬಾಲ್ಯವಿವಾಹ  ಮತ್ತು ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಪಾಲಕರು ಬಾಲ್ಯ ವಿವಾಹ ತಡೆಗೆ ಸಹಕಾರ ನೀಡುವ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಬೇಕು.  ಕರೋನಾ  ಸೇರಿದಂತೆ ಹಲವಾರು ಮಾರಕ ರೋಗಗಳನ್ನು ನಾವು ಮಟ್ಟಹಾಕಿದ್ದು ,ನಾವೆಲ್ಲರೂ ಒಗ್ಗೂಡಿ ಸಾಮಾಜಿಕ ಕಳಂಕವಾಗಿರುವ ಬಾಲ್ಯವಿವಾಹವನ್ನು ಮಟ್ಟಹಾಕೋಣ ಎಂದು ಹೇಳಿದರು.
ಕಾರ್ಯಕವನ್ನು ಉದ್ಘಾಟಿಸಿ ಮಾತನಾಡಿದ  ಸಿಂದಗಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಹರೀಶ ಜಾಧವ್ ಅವರು ಬಾಲ್ಯವಿವಾಹದಿಂದ ಎದುರಾಗುವ ಸಮಸ್ಯೆಗಳು, ಕಾನೂನು, ದಂಡ,ಶಿಕ್ಷೆ ಮುಂತಾದವುಗಳನ್ನು ತಿಳಿಸಿಕೊಟ್ಟರು.ಕಡ್ಡಾಯವಾಗಿ ಕಾನೂನಿನ ಪ್ರಕಾರ ಬಾಲಕರಿಗೆ 21,ಬಾಲಕಿಯರಿಗೆ 18 ವರ್ಷಗಳ ನಂತರ ಮದುವೆ ಮಾಡಬೇಕು ಎಂದರು.ಪೆನಲ್ ವಕೀಲರಾದ ಶ್ರೀಮತಿ ಎಸ್. ಎಮ್. ಕಾಚೂರ ಅವರು ಉಪನ್ಯಾಸವನ್ನು ನೀಡುತ್ತಾ ಬಾಲ್ಯವಿವಾಹದ ಅನೇಕ ಉದಾಹರಣೆಗಳನ್ನು ನೀಡಿ ವಿವಾಹ ವಿಚ್ಚೇದನದ ಸಮಸ್ಯೆಗಳು, ಅನಾರೋಗ್ಯಪೀಡಿತರಾಗುವದರ ಬಗ್ಗೆ ಎಲ್ಲರಿಗೂ ಸವಿವರವಾಗಿ ಹೇಳಿದರು. ಗೌರವಾನ್ವಿತ ನ್ಯಾಯಾಧೀಶರು ಮುಳಸಾವಳಗಿ ಗ್ರಾಮದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ತುಂಬಾ ಖುಷಿಯಾದರು.ಗ್ರಾಮದಲ್ಲಿ ಬಾಲ್ಯವಿವಾಹ ಮುಕ್ತ ಕರ್ನಾಟಕದ ಕುರಿತು ಪ್ರತಿಜ್ಞೆ ವಿಧಿಯನ್ನು ಬೋಧಿಸಲಾಯಿತು. ಗ್ರಾಮದ ಬೀದಿಬೀದಿಗಳಲ್ಲಿ ಜಾಥಾ ಮೂಲಕ ಅಲ್ಲಲ್ಲಿ ಸಭೆಗಳನ್ನು ಮಾಡಿ ಬಾಲ್ಯವಿವಾಹದ ಘನಘೋರತೆಯ ಕುರಿತು ಜನರಿಗೆ ತಿಳಿಸಲಾಯಿತು.ಗ್ರಾಮಸ್ಥರು ಹಾಗೂ ತಾಯಂದಿರು ಬಾಲ್ಯವಿವಾಹದ ಪರಿಣಾಮಗಳನ್ನು ಅರಿತು ಈ ಪಿಡುಗನ್ನು ಕೊನೆಗಾಣಿಸುವದಾಗಿ ಸಂಕಲ್ಪ ಮಾಡಿದರು. ವಕೀಲರ ಸಂಘದ ಎನ್.ಎಮ್. ದೊಡ್ಡಮನಿ, ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಐ.ಎಸ್. ನರೂಣಿ,ಸಿ.ಆರ್.ಪಿ ಎಸ್. ಎಮ್. ರೋಡಗಿ ,ಎಸ್. ಡಿ. ಎಮ್. ಸಿ ಅಧ್ಯಕ್ಷ ಮನೋಹರ ಪೂಜಾರಿ, ಎನ್.ಎಸ್. ರೋಡಗಿ,ಜಿ.ಎಸ್. ರೋಡಗಿ,ರಾಮಚಂದ್ರ ತೇಲಿ,ಅರ್ಜುನ ವಾಲೀಕಾರ, ಈರಣ್ಣ ಬಸರಕೋಡ, ಪ್ರದೀಪ ಹದರಿ ಸೇರಿದಂತೆ ಶಾಲಾಮಕ್ಕಳು,ಗ್ರಾಮಸ್ಥರು ಹಾಗೂ ಮಾತೆಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!