ಉದಯವಾಹಿನಿ, ಟೆಲ್ ಅವೀವ್ (ಇಸ್ರೇಲ್): ಗಾಜಾದಲ್ಲಿ ನಡೆಯುತ್ತಿರುವ ಯುದ್ಧವು ಹಮಾಸ್ ತಂತ್ರಗಳಿಂದಾಗಿ ಸವಾಲಾಗಿದ್ದು ಗಾಜಾ ಯುದ್ಧದಲ್ಲಿ ನಾಗರಿಕರ ಸಾವು ನೋವುಗಳನ್ನು ತಪ್ಪಿಸಲು ಇಸ್ರೇಲ್ ಪ್ರಯತ್ನಿಸುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನ್ಯಾಹು ಹೇಳಿದ್ದಾರೆ.ಇಸ್ರೇಲ್‌ಗೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಬೈಡನ್ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ನೆತನ್ಯಾಹು, ಹಮಾಸ್ ವಿಭಿನ್ನ ರೀತಿಯ ಶತ್ರುವಾದ್ದರಿಂದ ಇದು ವಿಭಿನ್ನ ರೀತಿಯ ಯುದ್ಧವಾಗಿದೆ. ಈ ಯುದ್ಧದಲ್ಲಿ ನಾವು ಮುಂದುವರಿದಂತೆಲ್ಲಾ, ನಾಗರಿಕರನ್ನು ಅಪಾಯದ ವ್ಯಾಪ್ತಿಯಿಂದ ದೂರ ಇರಿಸಲು ನಾವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದ್ದೇವೆ’ ಎಂದರು. ಈ ವೇಳೆ ಮಾತನಾಡಿದ ಬೈಡನ್, ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಿದ ಹಮಾಸ್ ವಿರುದ್ಧ ಹೋರಾಟ ನಡೆಸಲು ಇಸ್ರೇಲ್‌ಗೆ ಎಲ್ಲಾ ರೀತಿಯಲ್ಲಿ ಹಕ್ಕಿದೆ. ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿಲ್ಲ. ನಾಗರಿಕರ ಸಾವು-ನೋವುಗನ್ನು ತಡೆಯಲು ಇಸ್ರೇಲ್ ಅಮೆರಿಕದೊಂದಿಗೆ ಕಾರ್ಯ ನಿರ್ವಹಿಸಲಿದೆ ಎಂದರು. ‘ನಿಮ್ಮ ಜನರ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ನಿಮಗೆ ಅಮೆರಿಕದ ಬೆಂಬಲ ಮುಂದುವರಿಯಲಿದೆ.
ಈ ಪ್ರದೇಶದಾದ್ಯಂತ ಅಮಾಯಕ ನಾಗರಿಕರಿಗೆ ಇನ್ನಷ್ಟು ದುರಂತ ತಪ್ಪಿಸಲು ಅಮೆರಿಕ ಬದ್ಧವಾಗಿದೆ’ ಎಂದು ಇಸ್ರೇಲ್ ಮುಖಂಡರನ್ನು ಉದ್ದೇಶಿಸಿ ಬೈಡನ್ ಹೇಳಿದ್ದಾರೆ. ಇನ್ನು ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಲ್ಲಿ ೪೭೧ ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದೆಡೆ ಆಸ್ಪತ್ರೆ ಮೇಲಿನ ದಾಳಿಗೆ ಇಸ್ರೇಲ್ ಕಾರಣ ಎಂಬ ಹಮಾಸ್ ಆರೋಪಿಸುತ್ತಿದ್ದರೆ ಅತ್ತ ಹಮಾಸ್‌ನ ಕ್ಷಿಪಣಿ ವೈಫಲ್ಯದಿಂದ ಆಸ್ಪತ್ರೆ ಧ್ವಂಸಗೊಂಡಿದೆ ಎಂದು ಇಸ್ರೇಲ್ ಪ್ರತ್ಯಾರೋಪ ಮಾಡಿದೆ.
