ಉದಯವಾಹಿನಿ, ಬೀಜಿಂಗ್: ಹೊಸ ರೀತಿಯ ದೀರ್ಘ ಶ್ರೇಣಿಯ ಕ್ಷಿಪಣಿಗಳಿಂದ ಉಕ್ರೇನ್‌ಗೆ ಯಾವುದೇ ರೀತಿಯಲ್ಲಿ ಪ್ರಯೋಜನಗಳಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ. ಬೀಜಿಂಗ್‌ನಲ್ಲಿ ನಡೆಯುತ್ತಿರುವ ಬಿಆರ್‌ಐ ಯೋಜನೆಯ ೧೦ನೇ ವರ್ಷಾಚರಣೆಯ ಶೃಂಗಸಭೆಯ ನೇಪಥ್ಯದಲ್ಲಿ ಅವರು ಮಾತನಾಡುತ್ತಿದ್ದರು.
ಅಮೆರಿಕಾ ನೀಡಿರುವ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ನಾವು ರಷ್ಯಾ ವಿರುದ್ಧ ಬಳಸಲು ಆರಂಭಿಸಿದ್ದು, ಇದು ಈಗಾಗಲೇ ತನ್ನ ಶಕ್ತಿ ಪ್ರದರ್ಶಿಸುತ್ತಿದೆ ಎಂದು ನಿನ್ನೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪುಟಿನ್, ಪಣಿಗಳಿಂದ ಉಕ್ರೇನ್‌ಗೆ ಯಾವುದೇ ರೀತಿಯಲ್ಲಿ ಪ್ರಯೋಜನಗಳಿಲ್ಲ. ಅಲ್ಲದೆ ಉಕ್ರೇನ್‌ಗೆ ದೀರ್ಘ-ಶ್ರೇಣಿಯ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ನೀಡಿರುವುದು ಅಮೆರಿಕಾದ ದೊಡ್ಡ ಪ್ರಮಾದವಾಗಿದೆ. ಯುದ್ದವೆಂದೇ ಯುದ್ದವೇ ಆಗಿದ್ದು, ಅದರಲ್ಲಿ ಬೆದರಿಕೆ ಕೂಡ ಇದೆ. ಆದರೆ ಉಕ್ರೇನ್‌ಗೆ ಅಮೆರಿಕಾದ ಕ್ಷಿಪಣಿ ಪೂರೈಕೆಯಿಂದ ಸಂಪರ್ಕದ ಸಾಲಿನಲ್ಲಿನ ಪರಿಸ್ಥಿತಿಯನ್ನು ನಾಟಕೀಯವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಪುಟಿನ್ ತಿಳಿಸಿದ್ದಾರೆ. ಇನ್ನು ಉಕ್ರೇನ್‌ಗೆ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ಪೂರೈಸಿರುವ ಬಗ್ಗೆ ಸ್ವತಹ ಅಮೆರಿಕಾದ ಶ್ವೇತಭವನ ಕೂಡ ಖಚಿತಪಡಿಸಿದೆ. ಎಟಿಎಸಿಎಂಎಸ್ ಕ್ಷಿಪಣಿಯ ಈ ಆವೃತ್ತಿಯು ೧೬೦ ಕಿ.ಮೀ. ವ್ಯಾಪ್ತಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.
