ಉದಯವಾಹಿನಿ, ಗೌರಿಬಿದನೂರು: ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಶಿಕ್ಷಣದ ಜೊತೆ ಜೊತೆಯಲ್ಲಿ ಬದುಕಿನ ಮೌಲ್ಯಗಳನ್ನು ಅರಿತು ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯವನ್ನು ಬೆಸೆಯುವ ಚಟುವಟಿಕೆಗಳಲ್ಲಿ ಭಾಗವಹಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಮಂಚೇನಹಳ್ಳಿ ಠಾಣೆಯ ಪಿಎಸೈ ಟಿ.ಮೂರ್ತಿ ತಿಳಿಸಿದರು.
ತಾಲ್ಲೂಕಿನ ಅಲಕಾಪುರದಲ್ಲಿ ಬುಧವಾರ ನಗರದ ಎಸ್ ಎಸ್ ಇ ಎ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಸ್ವಯಂ ಸೇವಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶಪ್ರೇಮ ಮತ್ತು ಸೇವಾ ಮನೋಭಾವಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಪರಿಪಕ್ವತೆಯನ್ನು ಪಡೆಯಬೇಕಾಗಿದೆ. ಆಧುನಿಕ ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣಗಳು ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಜಾಗೃತಿ ವಹಿಸಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಬದುಕಿಗೆ ರಕ್ಷಣೆ ಒದಗಿಸಬೇಕಾಗಿದೆ. ನಿತ್ಯ ಸಮಾಜದಲ್ಲಿ ನಡೆಯುವ ಹತ್ತಾರು ಅಪರಾಧ ಪ್ರಕರಣಗಳಲ್ಲಿ ಗರಿಷ್ಟ ಮಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಸಂಬಂಧಿಸಿ ಪ್ರಕರಣಗಳಾಗಿರುತ್ತದೆ. ಆದ್ದರಿಂದ ಯಾವುದೇ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಭಾಗಿಯಾಗದೆ ಉಜ್ವಲವಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
