
ಉದಯವಾಹಿನಿ, ಮಸ್ಕಿ: ತಾಲೂಕಿನ ಹಾಲಾಪೂರ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ವರ್ಗ ಕಚೇರಿಗೆ ಸಮಯಕ್ಕೆ ಸರಿಯಾಗಿ ಬಾರದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ, ಗ್ರಾಪಂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾಲಾಪೂರ ಗ್ರಾಪಂ ಸದಸ್ಯರು ತಾಪಂ ಇಒ ಉಮೇಶ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪಟ್ಟಣದ ತಾಪಂ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದ . ಬಳಿಕ ಗ್ರಾಪಂ ಅಧ್ಯಕ್ಷೆ ಮಂಜಮ್ಮ ತುಗ್ಗಲದಿನ್ನಿ ಅವರು ಮಾತನಾಡಿ, ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಯ ಜನತೆ ಒಂದಿಲ್ಲೊಂದು ಸಮಸ್ಯೆ ಹಿಡಿದುಕೊಂಡು ಪಂಚಾಯಿತಿಗೆ ಬರುತ್ತಾರೆ, ಆದರೆ ಗ್ರಾಪಂ ಕಚೇರಿಯಲ್ಲಿ ಪಿಡಿಒ ಇರುವುದಿಲ್ಲ, ಸಿಬ್ಬಂದಿ ವರ್ಗ ಸಹ ಕರ್ತವ್ಯಕ್ಕೆ ಹಾಜರು ಇರುವುದಿಲ್ಲ, ಇದರಿಂದ ಜನರಿಗೆ ತೊಂದರೆ ಉಂಟಾಗಿದ್ದು,
ಕಳೆದ ಮೂರು ತಿಂಗಳುಗಳಿಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಜನ ಸಾಮಾನ್ಯರು ಗ್ರಾಪಂಗೆ ಸುಖಾ ಸುಮ್ಮನೆ ಅಲೆದಾಡುವಂತಾಗಿದೆ. ತಾಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಪಂ ಆಗಿರುವ 26 ಗ್ರಾಪಂ ಸದಸ್ಯರು ಇರುವ ಹಾಲಾಪೂರ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಪಿಡಿಒ ಅವರು ಕುಂಟು ನೆಪವೊಡ್ಡಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ,ಈ ಹಿಂದೆ ಅನೇಕ ಭಾರಿ ಮನವಿ ಮಾಡಿದರು ಪ್ರಯೋಜನವಾಗುತ್ತಿಲ್ಲ, ಕರ್ತವ್ಯಕ್ಕೆ ಪದೇ ಪದೇ ಗೈರು ಆಗುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಚಂದಪ್ಪ ದೊಡ್ಡಮನಿ, ದಲಿತ ಮುಖಂಡ, ಚೆನ್ನಪ್ಪ ಹೇಡಿಗಬಾಳ, ಸಿದ್ದಾರ್ಥ್ ಹಾಲಪುರ, ಮೌನೇಶ, ಅಮರೇಶ, ಮಹಾಂತೇಶ ಜಂಗಮರಹಳ್ಳಿ, ಶಂಕರಪ್ಪಗೌಡ ಯದ್ದಲದಿನ್ನಿ, ಜೊಕಿನ್ ಯದ್ದಲದಿನ್ನಿ, ನಿರುಪಾದೆಪ್ಪ ಸೇರಿದಂತೆ ಇನ್ನಿತರಿದ್ದರು.
