
ಉದಯವಾಹಿನಿ ಯಾದಗಿರಿ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಯಾದಗಿರಿ ನಗರದ 1) ನ್ಯೂ ಕನ್ನಡ ಪಿಯು ಕಾಲೇಜು, 2) ಸಬಾ ಪಿ.ಯು ಕಾಲೇಜು 3) ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು 4) ಎಲ್.ಕೆ.ಇ.ಟಿ ಬಾಲಕಿಯರ ಪಿ.ಯು ಕಾಲೇಜು ಮತ್ತು 5) ಮಹಾತ್ಮ ಗಾಂಧಿ ಪಿಯು ಕಾಲೇಜುಗಳಲ್ಲಿ ನಡೆದ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಮತ್ತು ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಪೂರ್ವ ಯೋಜಿತವಾಗಿ ಸಂಚು ರೂಪಿಸಿ ಬಂದು ಪರೀಕ್ಷಾ ಕೇಂದ್ರದ ಒಳಗಡೆ ನಿಷೇಧಿಸಲ್ಪಟ್ಟ ಬ್ಲೂಟೂಥ್ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಇತರೆ ಸೂಕ್ಷ್ಮ ಉಪಕರಣಗಳನ್ನು ಉಪಯೋಗಿಸಿ ಹೊರಗಡೆ ಇರುವ ವ್ಯಕ್ತಿಗಳಿಂದ ಉತ್ತರಗಳನ್ನು ಹೇಳಿಸಿಕೊಂಡು ಅಕ್ರಮ ಮಾರ್ಗದಿಂದ ಪರೀಕ್ಷೆ ಬರೆದು ನೈಜ ಮತ್ತು ಆರ್ಹ ಅಭ್ಯರ್ಥಿಗಳಿಗೆ ಅನ್ಯಾಯವೆಸಗುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಅಂತಹ ಅಭ್ಯರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿ ಪರೀಕ್ಷಾ ಕೇಂದ್ರಗಳ ಉಪ-ಮುಖ್ಯಸ್ಥರುಗಳು ಯಾದಗಿರಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರುಗಳ ಆಧಾರದ ಮೇರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ, 109, 114, 120(ಬಿ), 420 ಸಂಗಡ 149 ಐಪಿಸಿ ರೀತ್ಯಾ 05 ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.
ಮೇಲ್ಕಂಡಂತೆ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳನ್ನು ದಸ್ತಗಿರಿ ಮಾಡುವ ಸಲುವಾಗಿ ಶ್ರೀಮತಿ ಜಿ.ಸಂಗೀತಾ, ಪೊಲೀಸ್ ಅಧೀಕ್ಷಕರು, ಯಾದಗಿರಿ ಜಿಲ್ಲೆ ರವರು ಶ್ರೀ ಚಾವೇದ ಇನಾಮದಾರ್, ಡಿ.ವೈ.ಎಸ್.ಪಿ ಸುರಪುರ ಉಪ-ವಿಭಾಗ ರವರ ನೇತೃತ್ವದಲ್ಲಿ ಯಾದಗಿರಿ ಹಾಗೂ ಸುರಪುರ ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿರವರುಗಳನ್ನೊಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು, ಸದರಿ ತನಿಖಾ ತಂಡಗಳು ಶ್ರೀಮತಿ ಜಿ.ಸಂಗೀತಾ, ಪೊಲೀಸ್ ಅಧೀಕ್ಷಕರು, ಯಾದಗಿರಿ ಜಿಲ್ಲೆರವರ ಮಾರ್ಗದರ್ಶನದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಲಬುರಗಿ ಜಿಲ್ಲೆಯ ಅಜ್ಜಲ್‌ಪುರ, ಹಾಗೂ ವಿಜಯಪುರ ಜಿಲ್ಲೆಯ ಒಟ್ಟು 09 ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು ಪ್ರಕರಣದ ತನಿಖೆ ಪ್ರಗತಿಯಲ್ಲಿರುತ್ತದೆ.ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರುಗಳನ್ನು ಪೊಲೀಸ್ ಅಧೀಕ್ಷಕರು ಯಾದಗಿರಿ ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.
