
ಉದಯವಾಹಿನಿ,ಯಾದಗಿರಿ: ಜಿಲ್ಲೆಯ ಆರು ತಾಲೂಕುಗಳನ್ನು ಬರಗಾಲವೆಂದು ಘೋಷಿಸಲಾಗಿದ್ದು, ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ತಕ್ಷಣ ನೋಂದಣಿ ಮಾಡಿಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ತಿಳಿಸಿದರು. ಸುರಪುರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರಿಂದ ಕುಂದು ಕೊರತೆ ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು.ಜಿಲ್ಲೆಯ ರೈತರಿಗೆ ಮುಂದಿನ ದಿನಗಳಲ್ಲಿ ಸಕಾಲಕ್ಕೆ ಪರಿಹಾರ ದೊರೆಯಲು ಅನುಕೂಲವಾಗುವಂತೆ, ಈವರೆಗೆ ಫ್ರೂಟ್ಸ್ ತಂತ್ರಾಂಶದಲ್ಲಿ (FRUITS- Farmers registration and unified beneficiary information system) ನೋಂದಣಿ ಮಾಡಿಕೊಳ್ಳದೆ ಇರುವಂತಹ ರೈತರು, ತಕ್ಷಣ ತಮ್ಮ ಸಮೀಪದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಕಂದಾಯ ಇಲಾಖೆಯ ಕೇಂದ್ರಗಳಿಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ 2.32 ಲಕ್ಷ ರೈತರಿದ್ದು, ಈ ಪೈಕಿ ನೊಂದಣಿ ಮಾಡಿಕೊಳ್ಳದೆ ಇರುವಂತಹ ಸುಮಾರು 80 ಸಾವಿರ ರೈತರು ತಕ್ಷಣ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ , ಬ್ಯಾಂಕ್ ಅಕೌಂಟ್, ಜಾತಿ ಪ್ರಮಾಣ ಪತ್ರ ಹಾಗೂ ಎರಡು ಭಾವಚಿತ್ರಗಳೊಂದಿಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಿದ ಅವರು, ಜಿಲ್ಲಾಡಳಿತದಿಂದಲೂ ಕೂಡ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದು, ರೈತರು ತಪ್ಪದೆ ನೋಂದಣಿ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ರಾಜ್ಯ ಸರ್ಕಾರವು ಸಾರ್ವಜನಿಕರ ಹಾಗೂ ರೈತರ ಮನೆ ಬಾಗಿಲಿಗೆ ತಲುಪಿ ಕುಂದು ಕೊರತೆ ನಿವಾರಿಸಲು ಜನತಾದರ್ಶನದಂತಹ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈಗಾಗಲೇ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನತಾದರ್ಶನದಲ್ಲಿ ಸುಮಾರು 294 ಅರ್ಜಿಗಳ ಪೈಕಿ 189 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಅದರಂತೆ ಸುರಪುರ ತಾಲೂಕಿಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನದವರೆಗೆ 170 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಈ ಪೈಕಿ ಸ್ಥಳದಲ್ಲಿಯೇ 70 ಅರ್ಜಿಗಳಿಗೆ ಸಚಿವರು ಸ್ಪಂದಿಸಿ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
*ಈ ಸಂದರ್ಭದಲ್ಲಿ ಮಾತನಾಡಿದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ* ಅವರು, ರಾಜ್ಯ ಸರ್ಕಾರವು ಜನಸಾಮಾನ್ಯರ ಕುಂದು ಕೊರತೆಗಳಿಗೆ ಸ್ಪಂದಿಸಲು ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ಜನತಾದರ್ಶನದಂತಹ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಯೋಜಿಸಲು ಸೂಚಿಸಿದೆ. ಅದರ ಅನ್ವಯ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಈಗಾಗಲೇ ಯಾದಗಿರಿಯಲ್ಲಿ ಜನತಾದರ್ಶನ ಹಮ್ಮಿಕೊಂಡು, ಸುರಪುರದಲ್ಲಿಯೂ ಕೂಡ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹೆಚ್ಚು ಹೆಚ್ಚು ಸಾರ್ವಜನಿಕರು ಹಾಗೂ ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಕಾಜೊಲ್ ಪಾಟೀಲ, ಡಿವೈಎಸ್ಪಿ ಬಸವೇಶ್ವರ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ , ಸುರಪುರ ತಹಶೀಲ್ದಾರ ಕೆ.ವಿಜಯಕುಮಾರ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ , ತಾಲೂಕಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.
