
ಉದಯವಾಹಿನಿ, ದೇವರಹಿಪ್ಪರಗಿ: ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಲು ಜಲಜೀವನ ಮಿಷನ್ ಯೋಜನೆಯಡಿ ಮನೆಮನೆಗೆ ನಳಗಳ ಸಂಪರ್ಕ ಒದಗಿಸಲಾಗುತ್ತಿದೆ. ಅಮೂಲ್ಯವಾದ ಜಲ ಸಂಪತ್ತನ್ನು ಮಿತವಾಗಿ ಬಳಸಿ ಗ್ರಾಮಸ್ಥರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಸೋಮವಾರದಂದು ಜಿಲ್ಲಾ ಪಂಚಾಯತ್ ವಿಜಯಪುರ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಉಪವಿಭಾಗ ಸಿಂದಗಿ ವತಿಯಿಂದ, ತಾಲೂಕಿನ ಜಾಲವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಬ್ರಾಹಿಂಪುರ ಗ್ರಾಮದಲ್ಲಿ ಸುಮಾರು 40 ಲಕ್ಷ ರೂ ವೆಚ್ಚದ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು,ಪ್ರತಿ ಮನೆಗೆ ನಲ್ಲಿಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದ್ದು, ನೀರಿನ ತೊಟ್ಟಿ ಹಾಗೂ ಪೈಪ್ ಲೈನ್ ಕೆಲಸ ಸರಿಯಾಗಿ ಆಗಬೇಕು. ಪೈಪ್ ಅಳವಡಿಸಲು ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಬೇಕು. ಕೆಲಸ ನಿಗದಿತ ಅವಧಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗ್ರಾಮಸ್ಥರು ಕೂಡ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವ ಜೊತೆಗೆ ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಏನಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿ ಅಥವಾ ತಮ್ಮನ್ನು ಸಂಪರ್ಕಿಸಬೇಕೆಂದು ಹೇಳಿದರು.
ನಂತರ ಗ್ರಾಮಸ್ಥರಿಂದ ಗ್ರಾಮದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಬೇಡಿಕೆ ಸಲ್ಲಿಸಿದರು. ಎಲ್ಲ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಲಕ್ಷ್ಮಣ್ ಕೆಂಗುಟಗಿ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ, ಪ್ರಧಾನ ಕಾರ್ಯದರ್ಶಿಯಾದ ವೀರೇಶ್ ಕುದುರಿ, ಮುಖಂಡರುಗಳಾದ ಶರಣಪ್ಪಗೌಡ ಪಾಟೀಲ, ಶೇಖರಗೌಡ ಪಾಟೀಲ, ಖಾದಿರ್ ಬೆಕಿನಾಳ, ರೇಣುಕಾ ಅಂಗಡಿ, ಅಮಿನಿಸಾ, ಶಂಕರ್ ಗೌಂಡಿ, ರವಿ ಗೋಲಗೇರಿ ಸೇರಿದಂತೆ ಇಲಾಖೆ ಅಧಿಕಾರಿಗಳು,ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
