ಉದಯವಾಹಿನಿ,ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣ ಇಲಾಖೆ ವತಿಯಿಂದ ಸುರಕ್ಷಿತ ದೀಪಾವಳಿ ಕುರಿತು ‘ ಶುಭ ದೀಪಾವಳಿ ಸುರಕ್ಷಿತ ದೀಪಾವಳಿ’ ಎಂಬ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ  ಜಿಲ್ಲಾ ನೇತ್ರ ಶಸ್ತ್ರಚಿಕಿತ್ಸಕರಾದ ಡಾ.ಎಸ್.ಪಿ.ರವೀಂದ್ರ ಚಾಲನೆ ನೀಡಿದರು. ಕಾರ್ಯಕ್ರಮ ಕುರಿತು ಮಾತನಾಡಿದ ಅವರು ” ಬೆಳಕಿನ ದೀಪಾವಳಿ ಸಂತಸ ತರುವುದರ ಜತೆಗೆ ಸುರಕ್ಷಿತವಾಗಿಯೂ ಇರಬೇಕು. ಇದರ ಬಗ್ಗೆ ಎಲ್ಲರ ಕಾಳಜಿ ಇರಲಿ. ದೀಪಾವಳಿ ಹಬ್ಬದಲ್ಲಿ ಪಟಾಕಿಗಳನ್ನು ಹೊಡೆಯುವುದು ಸಾಮಾನ್ಯ ಅಭ್ಯಾಸ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಪಟಾಕಿ ಹೊಡೆಯಿರಿ ಪಟಾಕಿ ಸುಟ್ಟಾಗ ಅದರಿಂದ ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್ ರಸಾಯನಿಕಗಳು ಬಿಡುಗಡೆಯಾಗಿ ಮನುಷ್ಯರೂ ಸೇರಿದಂತೆ ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಮುಖ್ಯವಾಗಿ ಕಣ್ಣುಗಳ ದೃಷ್ಷಿಯನ್ನು ಹಾಳು ಮಾಡುತ್ತದೆ ಆದ್ದರಿಂದ ಪಟಾಕಿಗಳನ್ನು ಹಚ್ಚುವುದರ ಬದಲಾಗಿ ಹೆಚ್ಚಿನ ರೀತಿಯಲ್ಲಿ ದೀಪಗಳನ್ನು ಹಚ್ಚುವುದರ ಮೂಲಕ ಹಬ್ಬವನ್ನು ಆಚರಿಸಿದರೆ ಹಬ್ಬಕ್ಕೆ ಹೆಚ್ಚಿನ ಮೆರುಗು ಮತ್ತು ಸಂತಸವನ್ನು ತರುತ್ತದೆ ಬೆಳಕಿನ ಹಬ್ಬದಲ್ಲಿ ನಿಮ್ಮ ಕಣ್ಣಿನ ಬೆಳಕನ್ನು ಕಳೆದುಕೊಳ್ಳಬೇಡಿ ಸುರಕ್ಷತೆಯ ದೀಪಾವಳಿ ಎಲ್ಲರಿಗೂ ಶುಭವನ್ನು ತರಲಿ’ ಎಂದು ಹೇಳಿದರು.
ದೀಪಾವಳಿ  ಹಬ್ಬದಲ್ಲಿ ಕಣ್ಣುಗಳ ಸುರಕ್ಷತೆಯ ಮುನ್ನೆಚ್ಚರಿಕೆ ಕುರಿತು ಹಿರಿಯ ನೇತ್ರ ತಜ್ಞರಾದ ಡಾ.ಪ್ರದೀಪ್ ಬಿ.ಜಿ. ಮಾತನಾಡಿ ” ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ಚಿತ್ರದುರ್ಗ ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಅಂಧತ್ವ ನಿವಾರಣ ವಿಭಾಗವು ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳೊಂದಿಗೆ ಹಬ್ಬದ ದಿನಗಳಲ್ಲಿ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿದೆ. ಪಟಾಕಿಯಿಂದ ದೃಷ್ಟಿಕಳೆದುಕೊಂಡರೆ  ಪುನಃ ದೃಷ್ಟಿಪಡೆಯುವುದು ಸಾಧ್ಯವಿಲ್ಲ. ಒಂದು ವೇಳೆ ಬೇರೆಯವರು ನೇತ್ರದಾನ ಮಾಡಿದರೂ ಅದನ್ನು ಅಳವಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಣ್ಣಿಗೆ ಹಾನಿ ಉಂಟು ಮಾಡುವ ಪಟಾಕಿ ಬಗ್ಗೆ ಎಚ್ಚರ ವಹಿಸಬೇಕು ಆಕಸ್ಮಿಕವಾಗಿ ಪಟಾಕಿಯಿಂದ ಕಣ್ಣಿಗೆ ಹಾನಿಯಾದರೆ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಸಿಡಿಸಿದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆಯೇ ಸುಟ್ಟಪಟಾಕಿಗಳ ಬಿಸಿ ತುಂಡುಗಳನ್ನು ತುಳಿಯುವುದು ತಪ್ಪಲಿದೆ ಎಂದು ಸಲಹೆ ನೀಡಿದರು.ಇದೇ ಸಂಧರ್ಭದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಇಲಾಖೆ ವತಿಯಿಂದ ಕಣ್ಣಿನ ಶಸ್ತ್ರ ಚಿಕಿತ್ಸೆ ಪಡೆದ ಫಲಾನುಭವಿಗಳಿಗೆ ಶುಭ ಕೋರಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ್ ರಾಜು,ಜಿಲ್ಲಾ ನೇತ್ರಾಧಿಕಾರಿಗಳಾದ  ಕೆ.ಸಿ.ರಾಮು, ಪುಷ್ಪಲತ, ಲಕ್ಷ್ಮೀ, ರವಿಕುಮಾರ್, ಬೆಳಗಟ್ಟ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ್ ಡಿ., ಯೋಗ ತರಬೇತುದಾರ ರವಿ ಕೆ.ಅಂಬೇಕರ್, ಎಂ.ಆರ್. ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!