ಉದಯವಾಹಿನಿ, ಮೈಸೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅವೈಜ್ಞಾನಿಕ ತೀರ್ಮಾನಗಳನ್ನು ಖಂಡಿಸಿ, ಅವ್ಯವಹಾರಗಳ ತನಿಖೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮಂಡಳಿ ವತಿಯಿಂದ ವಿವಿಧ ಕಿಟ್‍ಗಳು, ಲ್ಯಾಪ್‍ಟಾಪ್, ಟ್ಯಾಬ್, ಶಾಲಾ ಕಿಟ್, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಕಾರ್ಮಿಕರು ಬೆವರು ಸುರಿಸಿ ದುಡಿದ ಸೆಸ್ ಹಣವನ್ನು ಮನಸೋಇಚ್ಚೆ ದುಂದುವೆಚ್ಚ ಮಾಡಲಾಗಿದೆ. ಈ ಕುರಿತು ಅವ್ಯವಹಾರಗಳ ತನಿಖೆ ನಡೆಸಬೇಕೆಂದು ಮನವಿ ಸಲ್ಲಿಸಿದ್ದರೂ ಹಿಂದಿನ ಬಿಜೆಪಿ ಸರ್ಕಾರ, ಈಗಿನ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ ಕಾರ್ಮಿಕ ಸಚಿವರು ಆಗಸ್ಟ್‍ನಲ್ಲಿ ನಡೆಸಿದ ಸಭೆಯಲ್ಲಿ ಸರ್ಕಾರ ಯಾವುದೇ ಕಿಟ್ ಅಥವಾ ಇತರೆ ವಸ್ತು ರೂಪದಲ್ಲಿ ಹಿಂದೆ ನೀಡುತ್ತಿದ್ದ ಎಲ್ಲವನ್ನೂ ನಿಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಆದರೆ, ಪ್ರಥಮ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‍ಟಾಪ್ ಖರೀದಿಸಿದ್ದಾರೆ. ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ 310 ಕೋಟಿ ರೂ ಖರ್ಚು ಮಾಡಿದ್ದಾರೆ. ಈ ಅಕ್ರಮ ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿ ಕಾರಿದರು.
ಈಗಾಗಲೇ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿ ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು. ಬಾಕಿ ಇರುವ ಸುಮಾರು 14 ಲಕ್ಷ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ವಿಲೇವಾರಿ ಮಾಡಬೇಕು. ಅ.30ರಂದು ಏಕಾಏಕಿ ಹೊರಡಿಸಿರುವ ಅಧಿಸೂಚನೆ ವಾಪಸ್ ಪಡೆದು, ಈ ಹಿಂದೆ ಇದ್ದ ಶೈಕ್ಷಣಿಕ ಧನ ಸಹಾಯ ಮುಂದುವರಿಸಬೇಕು. ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಂಡು ಮಂಡಳಿ ಅಭಿವೃದ್ಧಿಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು. ಕಾರ್ಮಿಕರ ಸಮಸ್ಯೆ ಪರಿಹರಿಸಲು ಎಐಟಿಯುಸಿಗೆ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ನೀಡಬೇಕು ಎಂದು ಒತ್ತಾಯಿಸಿದರು.
