ಉದಯವಾಹಿನಿ, ಬೆಂಗಳೂರು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಕುರಿತು ಯಾರೂ ಕೂಡ ಅಪಸ್ವರ ಎತ್ತಬಾರದೆಂದು ಕೇಂದ್ರ ಬಿಜೆಪಿ ನಾಯಕರು ಸ್ಥಳೀಯ ನಾಯಕರಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಂತರ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಹಿರಿಯರು ಬಹಿರಂಗವಾಗಿ ಮಾತನಾಡದಿದ್ದರೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.
ಕೆಲವರಂತೂ ಕನಿಷ್ಟ ಪಕ್ಷ ವಿಜಯೇಂದ್ರಗೆ ಶುಭಾಷಯವನ್ನು ಹೇಳದೆ ಅಂತರ ಕಾಪಾಡಿಕೊಂಡಿದ್ದರು. ಇದು ಮತ್ತೊಂದು ರೀತಯ ಭಿನ್ನಮತಕ್ಕೆ ದಾರಿ ಕಲ್ಪಿಸಲಿದೆ ಎಂಬುದನ್ನು ಅರಿತಿರುವ ಕೇಂದ್ರ ವರಿಷ್ಠರು ಪಕ್ಷದ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಸೂಚಿಸಿದರು.
ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಆಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಅದೇ ರೀತಿ ಕರ್ನಾಟಕ ಬಿಜೆಪಿ ಘಟಕಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ ನಾವು ಎಲ್ಲ ಸಾಧಕಬಾಧಕಗಳನ್ನು ಚರ್ಚಿಸಿದ್ದೇವೆ. ವಿಜಯೇಂದ್ರ ನೇಮಕವಾದ ನಂತರ ವಿರೋಧ ವ್ಯಕ್ತಪಡಿಸುತ್ತಿರುವ ಔಚಿತ್ಯವಾದರೂ ಏನೆಂದು ಪ್ರಶ್ನಿಸಿದ್ದಾರೆ.
ದೆಹಲಿ ಮಟ್ಟದಲ್ಲಿ ಪ್ರಭಾವಿಯಾಗಿರುವ ರಾಜ್ಯವನ್ನು ಪ್ರತಿನಿಧಿಸುವ ಪ್ರಮುಖರೊಬ್ಬರು ಕೆಲ ಹಿರಿಯರ ಜೊತೆ ದೂರವಾಣಿ ಮುಖೇನ ಚರ್ಚಿಸಿ ಹೈಕಮಾಂಡ್ ತೀರ್ಮಾನಕ್ಕೆ ವಿರೋಧ ಬೇಡ ಎಲ್ಲರೂ ಸಹಕಾರ ಕೊಡಬೇಕೆಂದು ಸೂಚಿಸಿದ್ದಾರೆ.
