ಉದಯವಾಹಿನಿ, ಬೆಂಗಳೂರು: ನಗರದಲ್ಲಿರುವ ಕೆನರಾ ಬ್ಯಾಂಕ್ ಗಾಂಧೀನಗರದ ಸಹ ಪ್ರಧಾನ ಕಾರ್ಯಾಲಯದಲ್ಲಿ ಕೆನರಾ ಬ್ಯಾಂಕ್ ಕನ್ನಡ ಬಳಗದ ಸದಸ್ಯರು ತನ್ನ ಕನ್ನಡೇತರ ಬ್ಯಾಂಕ್ ಉದ್ಯೋಗಿಗಳಿಗೆ ಕರ್ನಾಟಕ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಈ ಸ್ಪರ್ಧೆಯಲ್ಲಿ ೫೭ ಕನ್ನಡೇತರ ಬ್ಯಾಂಕ್ ಉದ್ಯೋಗಿಗಳು ಭಾಗವಹಿಸಿದ್ದರು.
ವೆಂಕಟೇಶ ಶೇಷಾದ್ರಿಯವರು ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟಿದ್ದರು. ಬಳಗದ ಮುಖ್ಯ ಪದಾಧಿಕಾರಿಗಳಾದ ಶ್ರೀಕಾಂತ ಪತ್ರೆಮರ ಮಾತನಾಡಿ ಕನ್ನಡ ನೆಲದ, ನುಡಿಯ ಅರಿವು ಇರದ ಇತರ ರಾಜ್ಯದ ಬ್ಯಾಂಕ್ ನೌಕರರು ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಬಂದ ಕೆಲವಾರು ತಿಂಗಳುಗಳಲ್ಲಿ, ಅವರು ಗ್ರಹಿಸಿರಬಹುದಾದ ಕನ್ನಡ ನೆಲದ ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ರಸಪ್ರಶ್ನೆಗಳನ್ನು ಸಿದ್ಧಪಡಿಸಲಾಗಿತ್ತು ಎಂದರು. ಕೆನರಾ ಬ್ಯಾಂಕ್‌ನ ಉಪ ಮಹಾಪ್ರಬಂಧಕರಾದ ಬಿ.ಪಾರ್ಶ್ವನಾಥ್ ಮತ್ತು ಸಹಾಯಕ ಮಹಾಪ್ರಬಂಧಕರಾದ ಎಂ ಪಿ ಪ್ರವೀಣ್ ರವರು ಮಾತನಾಡಿ, ೧೬.೧೧.೨೦೨೩ ರಂದು ಹಮ್ಮಿಕೊಂಡಿರುವ ಸುವರ್ಣ ಸಂಭ್ರಮದ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡುವುದಾಗಿಯೂ ಮತ್ತು ಅಂದಿನ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರಾದ ಗುರುರಾಜ ಹೊಸಕೋಟೆ ಮತ್ತು ಶಶಿಧರ ಕೋಟೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಬಳಗದ ಪದಾಧಿಕಾರಿಗಳಾದ ಮಮತಾ, ಲೋಕೇಶ್, ವಿನಯ ನಿರವಾಣಿ, ಸುನಿಲ್ ರವರು ಉಪಸ್ಥಿತರಿದ್ದರು.
