ಉದಯವಾಹಿನಿ, ತುಮಕೂರು: ‘ಸದ್ಯಕ್ಕೆ ಬಿಜೆಪಿಯಲ್ಲೇ ಇದ್ದೇನೆ. ಪಕ್ಷ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಪಕ್ಷಕ್ಕೆ ಬರುವಂತೆ ಕಾಂಗ್ರೆಸ್ ನಾಯಕರು ಆಹ್ವಾನಿಸಿಲ್ಲ, ಯಾರೂ ಸಂಪರ್ಕ ಮಾಡಿಲ್ಲ’ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಸ್ಪಷ್ಟಪಡಿಸಿದರು.ಪಕ್ಷಾಂತರದ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು, ‘ತುಮಕೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದಲೇ ಟಿಕೆಟ್ ಸಿಗುವ ವಿಶ್ವಾಸ ಇದೆ. ಜಾತಿ, ಪಕ್ಷವನ್ನು ಮೀರಿ ನಾನು ಸ್ಪರ್ಧೆ ಮಾಡಬೇಕು ಎಂಬ ಬಯಕೆಯನ್ನು ಜಿಲ್ಲೆಯ ಜನರು ವ್ಯಕ್ತಪಡಿಸುತ್ತಿದ್ದಾರೆ. ಸ್ಪರ್ಧಿಸಲೇಬೇಕು ಎಂಬ ಒತ್ತಡ ತರುತ್ತಿದ್ದಾರೆ. ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ. ಈ ವಿಚಾರವನ್ನು ನಮ್ಮ ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದೇನೆ’ ಎಂದು ತಿಳಿಸಿದರು.
ಜಿಲ್ಲೆಯ ಜನರ ಭಾವನೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ಅರ್ಥಮಾಡಿಕೊಂಡು ರಾಜಕೀಯ ಪಕ್ಷಗಳು ನಿರ್ಧಾರ ಕೈಗೊಳ್ಳುತ್ತವೆ. ಕ್ಷೇತ್ರದಲ್ಲಿ ಪ್ರವಾಸ ಮಾಡಿ ಜನರನ್ನು ಭೇಟಿಯಾಗಿ, ನಿಕಟವಾದ ಸಂಪರ್ಕವನ್ನು ಇಟ್ಟುಕೊಂಡಿದ್ದೇನೆ. ಜನರ ಭಾವನೆ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಆಧಾರದ ಮೇಲೆ ಟಿಕೆಟ್ ನೀಡುವ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.
