ಉದಯವಾಹಿನಿ, ಚಳಿಗಾಲದ ಆಗಮನದೊಂದಿಗೆ ದೇಹದ ಅಗತ್ಯಗಳು ಬದಲಾಗುತ್ತವೆ. ಕಡಿಮೆ ತಾಪಮಾನ, ಶೀತ ಗಾಳಿ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ದೇಹಕ್ಕೆ ಹೆಚ್ಚುವರಿ ಶಕ್ತಿ, ಒಳಗಿನ ಉಷ್ಣತೆ ಮತ್ತು ಬಲವಾದ ರೋಗನಿರೋಧಕ ಶಕ್ತಿ ಅಗತ್ಯವಾಗುತ್ತದೆ. ಈ ಸಂದರ್ಭದಲ್ಲಿ ದುಬಾರಿ ಪೂರಕಗಳು ಅಥವಾ ಔಷಧಿಗಳ ಬದಲು, ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ ಬೆಲ್ಲವನ್ನು ಆಹಾರದಲ್ಲಿ (Food) ಸೇರಿಸಿಕೊಳ್ಳುವುದು ಅತ್ಯುತ್ತಮ ಆಯ್ಕೆಯಾಗಿದೆ. ಆಯುರ್ವೇದದಲ್ಲಿಯೂ ಬೆಲ್ಲವನ್ನು ಚಳಿಗಾಲದ ಆರೋಗ್ಯ ಸ್ನೇಹಿ ಆಹಾರವೆಂದು (Food) ಪರಿಗಣಿಸಲಾಗಿದೆ. ಈ ಕುರಿತು ಬೆಲ್ಲದ ಪದಾರ್ಥದಲ್ಲಿ ಬೆರಸಿ ತಿನ್ನಿವುದರಿಂದ ದೊರೆಯುವ ಲಾಭವೇನು ಎನ್ನುವುದನ್ನು ತಿಳಿಯೋಣ ಬನ್ನಿ.
ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳೆಂದರೆ ಶೀತ, ಕೆಮ್ಮು, ದೌರ್ಬಲ್ಯ ಮತ್ತು ಆಲಸ್ಯ. ಬೆಲ್ಲವು ದೇಹಕ್ಕೆ ಒಳಗಿನಿಂದ ಉಷ್ಣತೆ ನೀಡುವ ಗುಣ‘ ಹೊಂದಿದ್ದು, ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಬೆಲ್ಲ ಸೇವಿಸುವುದರಿಂದ ಶೀತದ ತೊಂದರೆ ಕಡಿಮೆಯಾಗುತ್ತದೆ ಮತ್ತು ದೇಹ ಚುರುಕಾಗಿರುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿಯೂ ಬೆಲ್ಲ ಮಹತ್ವದ ಪಾತ್ರ ವಹಿಸುತ್ತದೆ. ಬೆಲ್ಲದಲ್ಲಿ ಇರುವ ಕಬ್ಬಿಣ, ಸತು ಮತ್ತು ಉತ್ಕರ್ಷಣ ನಿರೋಧಕಗಳು ದೇಹವನ್ನು ವೈರಲ್ ಸೋಂಕುಗಳು, ಶೀತ ಮತ್ತು ಕೆಮ್ಮಿನಿಂದ ರಕ್ಷಿಸಲು ನೆರವಾಗುತ್ತವೆ. ಚಳಿಗಾಲದಲ್ಲಿ ಪದೇಪದೇ ಅನಾರೋಗ್ಯಕ್ಕೆ ಒಳಗಾಗುವವರು ತಮ್ಮ ದೈನಂದಿನ ಆಹಾರದಲ್ಲಿ ಬೆಲ್ಲವನ್ನು ಸೇರಿಸಿಕೊಂಡರೆ ರೋಗಗಳನ್ನು ಎದುರಿಸುವ ಶಕ್ತಿ ಹೆಚ್ಚಾಗುತ್ತದೆ. ಶೀತ ಕಾಲದಲ್ಲಿ ರಕ್ತ ಪರಿಚಲನೆ ನಿಧಾನವಾಗುವುದರಿಂದ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮಲಬದ್ಧತೆ, ಅನಿಲ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಬೆಲ್ಲವು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಊಟದ ನಂತರ ಸ್ವಲ್ಪ ಬೆಲ್ಲ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಾಗವಾಗಿ ಕೆಲಸ ಮಾಡುತ್ತದೆ.
ನೈಸರ್ಗಿಕ ಔಷಧಿಯಂತೆ ಕಾರ್ಯ
ರಕ್ತಹೀನತೆ ಸಮಸ್ಯೆ ಇರುವವರಿಗೆ ಬೆಲ್ಲ ನೈಸರ್ಗಿಕ ಔಷಧಿಯಂತೆ ಕೆಲಸ ಮಾಡುತ್ತದೆ. ಬೆಲ್ಲ ಕಬ್ಬಿಣದ ಉತ್ತಮ ಮೂಲವಾಗಿದ್ದು, ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಮಹಿಳೆಯರಲ್ಲಿ ದಣಿವು, ತಲೆತಿರುಗುವಿಕೆ ಸಾಮಾನ್ಯವಾಗಿರುವುದರಿಂದ, ಅವರಿಗೆ ಬೆಲ್ಲವು ವಿಶೇಷವಾಗಿ ಉಪಯುಕ್ತವಾಗಿದೆ. ಚಳಿಗಾಲವು ಚರ್ಮವನ್ನೂ ಒಣಗಿಸಿ ಮಂದವಾಗಿಸುತ್ತದೆ. ಬೆಲ್ಲ ದೇಹದಲ್ಲಿನ ವಿಷಪದಾರ್ಥಗಳನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದರಿಂದ ಚರ್ಮಕ್ಕೆ ನೈಸರ್ಗಿಕ ಹೊಳಪು ಬರುತ್ತದೆ. ಜೊತೆಗೆ ಮೊಡವೆ, ಕಪ್ಪು ಕಲೆಗಳು ಮತ್ತು ಇತರ ಚರ್ಮ ಸಮಸ್ಯೆಗಳನ್ನು ಕಡಿಮೆ ಮಾಡಲು ಬೆಲ್ಲ ಸಹಕಾರಿಯಾಗಿದೆ.
